ಚೆಯ್ಯಂಡಾಣೆ, ಜು. ೩: ವೀರಾಜಪೇಟೆ ತಾಲೂಕಿನ ಕದನೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಡಿನಿಂದ ಆಹಾರ ಅರಸಿ ನಾಡಿನತ್ತ ಬರುತ್ತಿರುವ ಕಾಡಾನೆಗಳು ಕಾಫಿ ತೋಟಗಳು ಹಾಗೂ ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಕದನೂರು ಗ್ರಾಮದಲ್ಲಿ ಬೆಳಿಗ್ಗೆ ಸುಮಾರು ೧೧ ಕಾಡಾನೆಗಳ ಹಿಂಡು ಸ್ಥಳೀಯ ಗದ್ದೆಯಲ್ಲಿ ಬೀಡು ಬಿಟ್ಟಿರುವುದನ್ನು ಗ್ರಾಮಸ್ಥರು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಅರಣ್ಯ ಇಲಾಖೆಯ ಡಿ.ಆರ್.ಎಫ್. ರಾಘವ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆರ್.ಆರ್.ಟಿ. ಸಿಬ್ಬಂದಿಗಳಾದ ಮಹೇಶ್, ಹರೀಶ್, ಅನಿಲ್, ಸುರೇಶ್, ಮುರುಗನ್ ಹಾಗೂ ಶ್ರೀನಿಧಿ ಅವರ ತಂಡ ಕಾಡಾನೆಗಳನ್ನು ಸುರಕ್ಷಿತವಾಗಿ ಮತ್ತೆ ಅರಣ್ಯದತ್ತ ಓಡಿಸುವ ಕಾರ್ಯ ಯಶಸ್ವಿಯಾಗಿ ನಡೆಸಿತು.

ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ವಿಶೇಷವಾಗಿ ಮಳೆಗಾಲದಲ್ಲಿ ಕಾಫಿ ತೋಟಗಳು, ಗದ್ದೆಗಳು ಹಾಗೂ ಗ್ರಾಮಗಳ ಸಮೀಪ ಕಾಡಾನೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ರೈತರು ಬೆಳೆ ಹಾನಿಯ ಜೊತೆಗೆ ಜೀವಭಯದಲ್ಲಿಯೇ ದಿನ ಕಳೆಯುವಂತಾಗಿದೆ.

ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಮತ್ತು ಅರಣ್ಯ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದರೂ, ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ ಎಂದು ರೈತರು ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾನವ - ಕಾಡಾನೆ ಸಂಘರ್ಷವನ್ನು ಕಡಿಮೆ ಮಾಡಲು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ, ರೈತರ ಜೀವ ಮತ್ತು ಆಸ್ತಿಪಾಸ್ತಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.