ಸಿದ್ದಾಪುರ, ಜು. ೫: ಒಂಟಿ ಸಲಗ ಮನೆಯ ಅಂಗಳಕ್ಕೆ ಲಗ್ಗೆ ಇಟ್ಟು ಆತಂಕ ಸೃಷ್ಟಿಸಿದ ಘಟನೆ ಸಿದ್ದಾಪುರ ಸಮೀಪದ ಕರಡಿಕಾಡು ಬಳಿ ಶನಿವಾರ ರಾತ್ರಿ ನಡೆದಿದೆ.
ಕರಡಿಕಾಡ್ ಖಾಸಗಿ ಕಾಫಿ ತೋಟದೊಳಗೆ ಕಾಡಾನೆ ಬೀಡು ಬಿಟ್ಟು ರಾತ್ರಿ ಸಮಯದಲ್ಲಿ ಮನೆಯ ಅಂಗಳಕ್ಕೆ ಲಗ್ಗೆ ಇಟ್ಟು ಮನೆಯ ಸುತ್ತಲಿನ ಕಿಟಕಿಯ ಬಳಿ ಸುತ್ತಾಡಿದೆ. ಮನೆಯ ಸುತ್ತಲು ಕಾಡಾನೆ ಸಂಚರಿಸುತ್ತಿರುವ ದೃಶ್ಯ ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದೆ. ಇದೇ ಸಲಗ ಸಿದ್ದಾಪುರದ ಪಟ್ಟಣದ ಪಾಲಿಬೆಟ್ಟ ರಸ್ತೆಯಲ್ಲಿ ಸಂಚರಿಸಿ ರಸ್ತೆಯ ಸಮೀಪದ ತೋಟಕ್ಕೆ ಲಗ್ಗೆ ಇಟ್ಟಿರುವ ದೃಶ್ಯಗಳು ಆ ಭಾಗದ ಅಂಗಡಿಗಳಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಗಳಲ್ಲಿ ಸೆರೆಯಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೂಡ ಮಾಹಿತಿ ದೊರೆತಿದ್ದು, ಬೃಹತ್ ಗಾತ್ರದ ಈ ಒಂಟಿ ಸಲಗವು ಕರಡಿಕಾಡ್, ಸಿದ್ದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಸಂಚರಿಸುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಸಂಜೆ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. - ವಾಸು