ಕಣಿವೆ, ಜು. ೫: ಹಾರಂಗಿ ಜಲಾಶಯ ನಿರ್ಮಾಣಕ್ಕೆ ೧೯೭೮ ರ ಅವಧಿಯಲ್ಲಿ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಅಪಾರ ಪ್ರಮಾಣದ ಆಸ್ತಿ - ಪಾಸ್ತಿ, ಮನೆ ಮಠ ಗಳನ್ನು ಕಳೆದುಕೊಂಡು ನಿರಾಶ್ರಿತರಾದ ಮಂದಿಗೆ ಹಾರಂಗಿ ಜಲಾಶಯದ ಎಡಬದಿಯಲ್ಲಿ ೧೦೫೭ ಎಕರೆ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ಯೋಜಿಸಿತ್ತು. ಅದರಂತೆಯೇ ಜಲಾಶಯ ನಿರ್ಮಾಣದ ಈ ತ್ಯಾಗಿಗಳಿಗೆ ಪ್ರತಿ ಕುಟುಂಬಕ್ಕೆ ಅರಣ್ಯ ಕಾಯಿದೆ ೧೯೬೩ ರ ಸೆಕ್ಷನ್ ೨೮ ರಡಿ ತಲಾ ೪ ಎಕರೆ ಕೃಷಿ ಭೂಮಿ, ವಾಸಕ್ಕೆ ಮನೆದಳ, ಪೂರಕವಾದ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಕ್ರಮೇಣ ೧೯೭೮ ರಿಂದಲೂ ಮುಂದಿನ ಅನೇಕ ದಶಕಗಳ ಕಾಲ ಕಂದಾಯ ಗ್ರಾಮಕ್ಕಾಗಿ ನಿರಂತರ ಹೋರಾಟ ನಡೆಸಿದ ಫಲವಾಗಿ ಆಳುವ ಸರ್ಕಾರ ೧೭/೦೫/೨೦೧೭ ರಂದು ಕಂದಾಯ ಗ್ರಾಮವಾಗಿ ಘೋಷಿಸಿತ್ತು. ಕಂದಾಯ ಗ್ರಾಮವಾಗಿ ಘೋಷಿಸುವ ಮುನ್ನಾ ೨೦೧೫ ರಲ್ಲಿ ಸರ್ಕಾರ ಮಾಡಿದ ಡಿನೋಟಿಫಿಕೇಷನ್ ಪ್ರಶ್ನಿಸಿ ಕೆಲವು ಪರಿಸರವಾದಿಗಳು ರಾಜ್ಯ ಉಚ್ಚನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ಸಲ್ಲಿಸಿದ ಪರಿಣಾಮ ನ್ಯಾಯಾಲಯ ೧೪/೦೩//೨೦೨೧ ರಂದು ಡಿನೋಟಿಫಿಕೇಷನ್ ರದ್ದು ಮಾಡಿ ಆದೇಶ ನೀಡಿತ್ತು.

ತರುವಾಯ ನ್ಯಾಯಾಲಯದ ಆದೇಶ ಪಾಲಿಸುವ ಸಲುವಾಗಿ ಸರ್ಕಾರ ಈಗಾಗಲೆ ಘೋಷಿತವಾಗಿದ್ದ ಕಂದಾಯ ಗ್ರಾಮವನ್ನು ರದ್ದು ಮಾಡಿದೆ.

ಈ ಹಿನ್ನೆಲೆಯಲ್ಲಿ ಗ್ರಾಮದ ಶಿವಬಸವೇಶ್ವರ ದೇವಾಲಯದ ಆವರಣದಲ್ಲಿ ಗ್ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ಸೇರ್ಪಡೆಯಾಗುವ ಮೂಲಕ ಮುಂದಿನ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿದರು.

ಜಿಲ್ಲೆಯ ಜನರಿಗೆ ಮಾರಕವಾಗಿರುವ ನೆರೆ ಜಿಲ್ಲೆಯ ಲಕ್ಷಾಂತರ ರೈತರಿಗೆ ಸಂಜೀವಿನಿಯಾಗಿರುವ ಹಾರಂಗಿ ಅಣೆಕಟ್ಟೆಯ ನೀರು ಸಂಗ್ರಹಕ್ಕೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಕಳೆದುಕೊಂಡ ನಮಗೆ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿ ರಸ್ತೆಗಿಳಿದು ಉಗ್ರ ಹೋರಾಟ ರೂಪಿಸಬೇಕೆಂದು ಗ್ರಾಮಸ್ಥರು ಒಕ್ಕೊರಲ ತೀರ್ಮಾನ ಕೈಗೊಂಡಿದ್ದಾರೆ.

ಮುಖ್ಯಮAತ್ರಿ ಭೇಟಿ

ಸರ್ಕಾರದ ನಿರ್ಧಾರದಿಂದಾಗಿ ಬೆಂಕಿಯಿAದ ಬಾಣಲೆಗೆ ಬಿದ್ದಂತಾಗಿರುವ ಗ್ರಾಮಸ್ಥರ ನಿಯೋಗ ಶಾಸಕ ಡಾ.ಮಂತರಗೌಡ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಗ್ರಾಮಸ್ಥರಿಗೆ ಆಗಿರುವ ಅನಾನುಕೂಲದ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ನಿವಾರಣೆಗೆ ಮನವಿ ಮಾಡಿದ್ದಾರೆ.

ಸೌಕರ್ಯ ಒದಗಿಸದಂತೆ ಅರಣ್ಯಾಧಿಕಾರಿಯಿಂದ ತಹಶೀಲ್ದಾರ್‌ಗೆ ಪತ್ರ

ಕಂದಾಯ ಗ್ರಾಮದಿಂದ ಯಡವನಾಡು ಗ್ರಾಮವನ್ನು ಮುಕ್ತ ಗೊಳಿಸಿದ ಸರ್ಕಾರದ ಕ್ರಮದ ಬಳಿಕ ಈ ಮಧ್ಯೆ ಸೋಮವಾರಪೇಟೆ ತಹಶೀಲ್ದಾರ್ ಅವರಿಗೆ ಪತ್ರ ಬರೆದಿರುವ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾರಂಗಿ ಜಲಾಶಯದ ಎಡ ಹಾಗೂ ಬಲ ಬದಿಯ ಯಡವನಾಡು ಹಾಗೂ ಅತ್ತೂರು ಗ್ರಾಮಗಳ ಮೀಸಲು ಅರಣ್ಯದ ಅಧಿಸೂಚಿತ ವಿಸ್ತೀರ್ಣ ೬೮೭೦.೯೨ ಎಕರೆ ಇದ್ದು ಸದರಿ ಜಾಗವೂ ಮೀಸಲು ಅರಣ್ಯವಾಗಿ ಮುಂದುವರೆದಿರುವುದರಿAದ ಈ ಪ್ರದೇಶದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಗೆ ಮತ್ತು ಇತರೇ ಮಂಜೂರಾತಿ ಕೋರುವ ಅರ್ಜಿದಾರರಿಗೆ ಯಾವುದೇ ಭೂ ಮಂಜೂರಾತಿಗೆ ಅವಕಾಶ ಇರುವುದಿಲ್ಲ. ಹಾಗೂ ಈ ಎರಡೂ ಗ್ರಾಮಗಳ ಖಾಸಗಿ ಜಾಗವನ್ನು ಭೂ ಪರಿವರ್ತನೆ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ.

ಇದರಿಂದಾಗಿ ಕುಪಿತರಾಗಿರುವ ಗ್ರಾಮಸ್ಥರು ತಮ್ಮ ನ್ಯಾಯಯುತವಾದ ಹಕ್ಕುಗಳಿಗಾಗಿ ಯಾವುದೇ ತೆರನ ಹೋರಾಟಕ್ಕೂ ಸಿದ್ದವಿರುವುದಾಗಿ ಘೋಷಿಸಿದ್ದಾರೆ. ಪುನರ್ವಸತಿ ಪ್ರದೇಶ ಯಡವನಾಡು ಗ್ರಾಮಸ್ಥರಿಗೆ ಸರ್ಕಾರ ದಿಂದ ಆಗಿರುವ ಘೋರ ಅನ್ಯಾಯಗಳನ್ನು ಖಂಡಿಸಿ ಹೋರಾಟಕ್ಕೆ ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್ ನೇತೃತ್ವದಲ್ಲಿ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

- ಕೆ.ಎಸ್.ಮೂರ್ತಿ