ಸೋಮವಾರಪೇಟೆ, ಜು. ೫: ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.

ಚುನಾವಣಾ ಪ್ರಕ್ರಿಯೆಯಲ್ಲಿ ೧೬ ವಿದ್ಯಾರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು. ಚುನಾವಣೆ ನಡೆದು ಕೆ.ಕೆ. ಸವಿತಾ, ಖುಷಿ, ವಿಜಯ್, ಎ.ಯು. ನಿಶ್ವಿತ, ಪ್ರಾರ್ಥನಾ ಲೋಬೊ, ಎ.ಆರ್. ಪೃಥ್ವಿ, ಎಂ.ಎಸ್. ಸುಬ್ರಮಣ್ಯ, ಎನ್.ಎಂ. ಸಿಂಚನಾ ಅವರುಗಳು ನಾಯಕರುಗಳಾಗಿ ಚುನಾವಣೆಯ ಮೂಲಕ ಆಯ್ಕೆಯಾದರು.

ಅಂತಿಮವಾಗಿ ಕೆ.ಕೆ. ಸವಿತಾ ಅವರನ್ನು ಮುಖ್ಯಮಂತ್ರಿಯಾಗಿ ನೇಮಕಗೊಂಡರು. ಉಳಿದ ವಿದ್ಯಾರ್ಥಿಗಳಿಗೆ ವಿವಿಧ ಖಾತೆಗಳನ್ನು ಮುಖ್ಯಮಂತ್ರಿಗಳು ಹಂಚಿಕೆ ಮಾಡಿದರು.

ಇಎಲ್‌ಸಿ ಕ್ಲಬ್‌ನ ಸಂಚಾಲಕಿ ಸಿ.ಜೆ. ಆಶಾ ಅವರು ಸಂಸತ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ, ಆಯ್ಕೆಯಾದ ಶಾಲಾ ಸಂಸತ್ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಮುಖ್ಯ ಶಿಕ್ಷಕಿ ರಾಜೇಶ್ವರಿ ಅವರು ಶಾಲಾ ಸಂಸತ್ ನಾಯಕರುಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಈ ರೀತಿಯ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಭಾರತದ ಚುನಾವಣೆ ಪ್ರಕ್ರಿಯೆ ಹಂತಗಳ ಪರಿಚಯವಾಗುವುದಲ್ಲದೆ, ಉತ್ತಮ ನಾಯಕರುಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನವನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಆಧಾರ್ ಕಾರ್ಡ್ಗಳೊಂದಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು, ಮೊಬೈಲ್ ವೋಟಿಂಗ್ ಮಿಷನ್ ಅಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರತ್ನಕುಮಾರ್, ಹಿರಿಯ ಶಿಕ್ಷಕ ಉಮೇಶ್, ಹೆಚ್.ಎನ್. ರತೀಶ್, ಲಿಖಿತ, ಭಾನುಮತಿ ಸಿಬ್ಬಂದಿ ಹೆಚ್.ಎನ್. ರುತೇಶ್ ಇದ್ದರು.