ಕಣಿವೆ, ಜು. ೫: ಈ ಬಾರಿ ಮಾರುಕಟ್ಟೆಯಲ್ಲಿ ಶುಂಠಿ ಫಸಲಿಗೆ ಉತ್ತಮವಾದ ದರ ಇದ್ದು ಬೆಳೆಗಾರರು ಸಂತಸದಲ್ಲಿದ್ದಾರೆ. ಕಳೆದ ಬಾರಿ ರೈತರು ಕೈಗೊಂಡಿದ್ದ ಶುಂಠಿ ಫಸಲಿಗೆ ಈಗಿನ ೧೧೦೦೦ ರೂ.ಗಳ ಮಾರುಕಟ್ಟೆ ದರ ಅನ್ವಯವಾಗುವುದರ ಜೊತೆಗೆ ಒಂದಷ್ಟು ಲಾಭವೂ ಆಗಲಿದೆ.

ಹೊರತುಪಡಿಸಿ ಈ ವರ್ಷ ಕೈಗೊಂಡ ಶುಂಠಿ ಬೆಳೆಗಾರರಿಗೆ ಈ ದರ ಸಿಹಿಯಾಗಲಾರದು.

ಏಕೆಂದರೆ ಕಳೆದ ಮಾರ್ಚ್ ತಿಂಗಳಿನಲ್ಲಿ ಬಿತ್ತನೆ ಮಾಡಿದ ಶುಂಠಿ ಇನ್ನೂ ಕೂಡ ಫಸಲು ಕಟ್ಟಿಲ್ಲ.

ಜೊತೆಗೆ ಈ ಬಾರಿ ಮಳೆಯ ಪ್ರಮಾಣವೂ ಕ್ಷೀಣಿಸಿರುವುದರಿಂದ ಶುಂಠಿಯ ಬೆಳವಣಿಗೆಗೆ ಇನ್ನೂ ಕೂಡ ಮೂರು ತಿಂಗಳ ಅವಧಿ ಬೇಕಾಗುತ್ತದೆ.

ಅದೃಷ್ಟವಶಾತ್ ಈಗಿನ ಇದೇ ದರ ಮಾರುಕಟ್ಟೆಯಲ್ಲಿ ಮುಂದಿನ ಮೂರು ತಿಂಗಳ ಕಾಲ ಇದ್ದಲ್ಲಿ ಶುಂಠಿ ಬೆಳೆಗಾರರ ಬದುಕು ಬಂಗಾರ ವಾಗುವುದರಲ್ಲಿ ಅಚ್ಚರಿಯಿಲ್ಲ.

ಅಂದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಶುಂಠಿ ಬೆಳೆ ಕೈಗೊಂಡ ಕೃಷಿಕರಿಗೆ ಮಾರುಕಟ್ಟೆಯಲ್ಲಿ ಉತ್ತಮ ದೊರ ದೊರಕದ ಹಿನ್ನೆಲೆಯಲ್ಲಿ ಬೆಳೆಗಾರರು ಅಪಾರ ಪ್ರಮಾಣದಲ್ಲಿ ನಷ್ಟಕ್ಕೆ ಸಿಲುಕಿದ್ದರು.

ಇದೀಗ ಕಳೆದ ಜೂನ್ ಮಾಸಾಂತ್ಯದ ತಾ.೨೦ ರಿಂದ ಜುಲೈ ಮೊದಲ ವಾರದಲ್ಲಿ ಕಂಡುಬರುತ್ತಿರುವ ಶುಂಠಿಯ ದರ ಜಮೀನಿನಲ್ಲಿ ಕಟಾವು ಮಾಡದೇ ಹಾಗೆಯೇ ಉಳಿಸಿಕೊಂಡಿರುವ ಹಳೆಯ ಶುಂಠಿ ರೈತರಿಗೆ ಲಾಭ ವಾಗುತ್ತದೆ.

ಇಮ್ಮಡಿಗೊಂಡ ಕೃಷಿಕರ ಸಂತಸ

ಅAತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಏರಿಕೆಯಾಗಿರುವ ಶುಂಠಿ ಫಸಲಿನ ಅತ್ಯುತ್ತಮ ದರ ಸಹಜವಾಗಿಯೇ ಶುಂಠಿ ಬೆಳೆಗಾರರ ಮೈ ಮನಸುಗಳನ್ನು ತೇಲಾಡಿಸಿದೆ.

ಕಳೆದ ೨೦೨೫ರ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಬಿತ್ತನೆ ಮಾಡಿದ್ದ ಕೃಷಿಕರು ಕಳೆದ ಬಾರಿ ಕಾಡಿದ ಮಾರಕ ವೈರಸ್‌ನಿಂದಾಗಿ ಶುಂಠಿ ಕಟಾವು ಮಾಡಿ ಮಾಡಿದ್ದರು.

ಆದರೆ ಕೆಲವು ಬಂಡವಾಳಶಾಹಿ ಬೆಳೆಗಾರರು ಬೆಳೆಗೆ ಬಾಧಿಸಿದ ರೋಗ ಹತೋಟಿಗೆ ಹಣ ಸುರಿದು ಶುಂಠಿ ಫಸಲನ್ನು ಉಳಿಸಿಕೊಂಡಿದ್ದಲ್ಲದೆ ಭೂಮಿಯೊಳಗೆ ಮತ್ತೆ ಮಣ್ಣಿನಿಂದ ಶುಂಠಿಯನ್ನು ಮುಚ್ಚಿ ಉತ್ತಮ ದರದ ಶೋಧನೆಯಲ್ಲಿದ್ದರು. ಇದೀಗ ಆ ದರ ಹಾಗೂ ಆ ಸುವರ್ಣ ದಿನಗಳು ಬಂದಿವೆ. ಗಾಳಿ ಬಂದಾಗ ತೂರಿಕೋ ಎಂಬ ಗಾಧೆಯ ಮಾತಿನಂತೆ ಮಾರುಕಟ್ಟೆ ಯಲ್ಲಿನ ಅತ್ಯುತ್ತಮವಾದ ೧೦ ಸಾವಿರ ರೂ ದರಕ್ಕೆ ಮನಸೋತು ಮತ್ತಷ್ಟು ಆಸೆ ಪಡದೇ ತಮ್ಮಲ್ಲಿ ಇರಬಹುದಾದ ಶುಂಠಿ ಫಸಲು ಕಟಾವು ಮಾಡಿದರೆ ಕ್ಷೇಮ.

ಬಿಸಿಲಿಗೆ ಕಡಿತಗೊಂಡ ಇಳುವರಿ

ದುರದೃಷ್ಟವಶಾತ್ ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಧರೆಯನ್ನು ಸುಟ್ಟ ಭಯಾನಕ ಬಿಸಿಲಿನಿಂದ ಭೂಮಿಯೊಳಗಿದ್ದ ಶುಂಠಿ ಫಸಲು ಕುಂಠಿತಗೊAಡಿತು. ಅಂದು ಎಕರೆಗೆ ೩೦೦ ರಿಂದ ೩೫೦ ಚೀಲ ಇಳುವರಿಯಿದ್ದ ಶುಂಠಿ ವರ್ಷದ ಬಳಿಕ ಕೇವಲ ನೂರರಿಂದ ನೂರ ಐವತ್ತು ಚೀಲಕ್ಕೆ ಸೀಮಿತಗೊಂಡಿದೆ. ಇದರಿಂದಾಗಿ ಬೆಳೆ ಹಾಗೂ ಬೆಲೆ ಎರಡು ಕೂಡ ಸಮನಾಂತರದಲ್ಲಿ ಇರುವುದರಿಂದ ಈಗ ಮಾರುಕಟ್ಟೆಯಲ್ಲಿರುವ ಅಧಿಕ ದರ ಕಳೆದ ಬಾರಿಯ ಶುಂಠಿ ಬೆಳೆಗಾರರ ಪಾಲಿಗೆ ಅಷ್ಟೇನು ಸಕ್ಕರೆಯಾಗಿ ಉಳಿದಿಲ್ಲ.

ಇನ್ನು ಈ ಬಾರಿ ಕಳೆದ ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಶುಂಠಿ ಬೆಳೆಗಾರರಿಗೆ ಇದೀಗ ಮಾರುಕಟ್ಟೆಯಲ್ಲಿ ಇರುವ ಹೊಸ ಶುಂಠಿಯ ದರ ನಾಲ್ಕರಿಂದ ಐದು ಸಾವಿರ ರೂಗಳ ಬೆಲೆ, ಮುಂದಿನ ಮೂರು ತಿಂಗಳು ಇದ್ದಲ್ಲಿ ಬೆಳೆಗಾರರಿಗೆ ನಿಜಕ್ಕೂ ಲಾಭವಾಗಲಿದೆ. ಆದರೆ, ಇದೀಗ ರೋಗಬಾಧಿತ ಶುಂಠಿ ಫಸಲನ್ನು ಕಟಾವು ಮಾಡುವುದರಿಂದ ಇಳುವರಿಯಲ್ಲಿ ಸಂಪೂರ್ಣ ಕುಸಿತವಾಗುತ್ತಿದೆ.

ಏಕರೆಗೆ ಕೇವಲ ೪೦ ರಿಂದ ೫೦ ಚೀಲ ಫಸಲು ಸಿಗುವುದು ಅನುಮಾನವಾಗಿದೆ.

ಮಾರುಕಟ್ಟೆಯಲ್ಲಿನ ೫೦೦೦ಗಳನ್ನು ಅಂದಾಜಿಸಿದರೆ ಬೆಳೆಗೆ ಖರ್ಚು ಮಾಡಿರುವ ಅರ್ಧ ಹಣವು ರೈತರ ಜೇಬು ತುಂಬಿಸಲಾರದು. ಹಾಗಾಗಿ ಶುಂಠಿ ಬೆಳೆಗಾರರಿಗೆ ತಾವು ಬೆಳೆದ ಶುಂಠಿ ಫಸಲು ಕನಿಷ್ಟ ಐದರಿಂದ ಆರು ತಿಂಗಳು ಕಳೆದದ್ದೇ ಆದಲ್ಲಿ ಈಗಿನ ದರ ಬೆಳೆಗಾರನ ಕೈಹಿಡಿದು ಮುಂದಿನ ಬಾರಿಗೂ ಕೈ ಹಿಡಿದು ಮುನ್ನಡೆಸುತ್ತದೆ. ಆದರೆ, ಈಗಿನ ಮಾರುಕಟ್ಟೆಯ ಈ ಅತ್ಯುತ್ತಮ ದರ ಇನ್ನೆಷ್ಟು ದಿನ ? ಎಂಬುದು ಬಹಳಷ್ಟು ರೈತರ ಭೀತಿಯ ಪ್ರಶ್ನೆಯಾಗಿದೆ.

ಎಕರೆಗೆ ೪.೫೦ ಲಕ್ಷ ಖರ್ಚು

ಒಂದು ಎಕರೆ ಹೊಲದಲ್ಲಿ ಶುಂಠಿ ಫಸಲು ತೆಗೆಯಲು ಆರರಿಂದ ಎಂಟು ತಿಂಗಳ ಅವಧಿಗೆ ೪.೫೦ ಲಕ್ಷ ರೂಗಳಿಂದ ೫ ಲಕ್ಷ ರೂ ಹಣ ಖರ್ಚಾಗುತ್ತದೆ. ಬಿತ್ತನೆ ಬೀಜ, ಉಳುಮೆ, ಸಾವಯವ ಗೊಬ್ಬರ, ಕೋಳಿ ಗೊಬ್ಬರ, ರಸಗೊಬ್ಬರ, ಕಳೆ ನಾಶಕ, ಕೀಟನಾಶಕ, ಮಣ್ಣು ಕೊಡುವುದು, ಕಳೆ ತೆಗೆವುದು, ಬಿತ್ತನೆ - ಕಟಾವು ಎಂದು ಕೊಂಡು ಏಕರೆಯೊಂದಕ್ಕೆ ೫ ಲಕ್ಷ ಖರ್ಚಾಗುವ ಕಾರಣ ಹಣವಂತರಷ್ಟೇ ಶುಂಠಿ ಬೆಳೆಯಬಲ್ಲರು. ಆದರೆ ಈಗಿನ ಮಾರುಕಟ್ಟೆಯ ಹೊಸ ಶುಂಠಿಯ ದರ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗದು.

- ಕೆ.ಎಸ್. ಮೂರ್ತಿ