ಪೊನ್ನಂಪೇಟೆ, ಜು. ೫: ಕಳೆದ ಎರಡು ದಿನಗಳಿಂದ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿರುವ ಪರಿಣಾಮ, ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ತಡೆಗೋಡೆಯೊಂದು ಕುಸಿದು ಬಿದ್ದಿದೆ. ತಡೆಗೋಡೆ ಕುಸಿದಿರುವುದರಿಂದ ಅದರ ಸಮೀಪದಲ್ಲೇ ನಿರ್ಮಿಸಲಾಗಿರುವ ಸಾಲು ಶೌಚಾಲಯಕ್ಕೂ ಹಾನಿ ಉಂಟಾಗಿದ್ದು, ಅದು ಕೂಡ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಕೆಲವು ದಿನಗಳ ಹಿಂದೆ ಶಾಲೆಯ ಪಕ್ಕದಲ್ಲಿರುವ ಖಾಸಗಿ ನಿವೇಶನದಲ್ಲಿ ಕಾಮಗಾರಿ ನಡೆಸುವ ಉದ್ದೇಶದಿಂದ ತಡೆಗೋಡೆಯ ತಳಭಾಗದ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆಗೆದುಹಾಕಲಾಗಿತ್ತು. ಇದರಿಂದ ತಡೆಗೋಡೆಯ ಅಡಿಪಾಯ ದುರ್ಬಲಗೊಂಡಿದ್ದು, ನಿರಂತರ ಮಳೆಯಿಂದ ಮಣ್ಣು ಸಡಿಲವಾಗಿ ಗೋಡೆ ಕುಸಿದು ಹೋಗಿದ್ದು, ತಾತ್ಕಾಲಿಕ ರಕ್ಷಣಾ ಕ್ರಮಗಳೊಂದಿಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಸಂದರ್ಭ ಮುಖ್ಯ ಶಿಕ್ಷಕ ಬಿ. ಎಂ. ವಿಜಯ್ ಮಾತನಾಡಿ ಪ್ರಸ್ತುತ ಮಳೆಗಾಲ ಇನ್ನೂ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಉಳಿದಿರುವ ತಡೆಗೋಡೆಯೂ ಅಪಾಯದ ಸ್ಥಿತಿಯಲ್ಲಿದೆ. ಗೋಡೆ ಸಂಪೂರ್ಣ ಕುಸಿದರೆ ಶಾಲಾ ಕಟ್ಟಡ, ಶೌಚಾಲಯ ಹಾಗೂ ಶಾಲಾ ಆವರಣಕ್ಕೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದೆ. ಶಾಲೆಯಲ್ಲಿ ಮಕ್ಕಳು ಸಂಚರಿಸುವ ಪ್ರದೇಶವಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ಕುರಿತ ಆತಂಕವೂ ಹೆಚ್ಚಾಗಿದೆ.

ತಡೆಗೋಡೆಯ ಪಕ್ಕದಲ್ಲಿರುವ ಸಾಲು ಶೌಚಾಲಯದ ಅಡಿಪಾಯಕ್ಕೂ ಹಾನಿಯಾಗಿರುವ ಲಕ್ಷಣಗಳು ಕಂಡುಬAದಿದ್ದು, ಯಾವುದೇ ಕ್ಷಣದಲ್ಲಿ ಅದು ಕುಸಿಯುವ ಸಾಧ್ಯತೆ ಇರುವುದರಿಂದ ಸಂಬAಧ ಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಜುನೈದ್ ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರಸ್ತುತ ೩೬೦ ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಪಾಠ ಪ್ರವಚನಗಳು ಉತ್ತಮ ಮಟ್ಟದಲ್ಲಿ ಇರುವ ಕಾರಣ ಈ ಶಾಲೆಯ ಅಭಿವೃದ್ಧಿಯ ಬಗ್ಗೆ ನಾವುಗಳು ಹೆಚ್ಚಿನ ಮಟ್ಟದಲ್ಲಿ ಶ್ರಮ ವಹಿಸುತ್ತಿದ್ದೇವೆ. ಕಳೆದ ಬಾರಿ ಶಾಸಕರ ರೂ. ೨ ಲಕ್ಷ ಅನುದಾನದಲ್ಲಿ ಕೊಠಡಿ ನಿರ್ಮಾಣವಾಗಿದ್ದು, ಈ ಬಾರಿ ರೂ. ೮ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಆದಷ್ಟು ಬೇಗ ದೊರೆತರೆ ಕಟ್ಟಡ ಕಾಮಗಾರಿ ನಡೆಸಲು ಸುಲಭವಾಗಬಹುದು ಎಂದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ಆರ್‌ಐ ಸುಧೀಂದ್ರ, ವಿಎ ಸುಮ, ಪೊಲೀಸ್ ಸಿಬ್ಬಂದಿ ವೇಣು ಇನ್ನಿತರರು ಭೇಟಿ ಪರಿಶೀಲನೆ ನಡೆಸಿದರು.