ಕೂಡಿಗೆ, ಜು. ೯: ಜಿಲ್ಲೆಯ ರೈತರು ಕಳೆದ ಸಾಲಿನಲ್ಲಿ ಶುಂಠಿ ಬೆಳೆಗೆ ಬೆಲೆಯಲ್ಲಿ ಕುಸಿತ ಕಂಡರೂ ಸಹ ಈ ಸಾಲಿನಲ್ಲಿ ಶುಂಠಿ ಬೇಸಾಯ ಮಾಡಿರುತ್ತಾರೆ. ಬೆಳೆಯು ಉತ್ತಮವಾಗಿ ಬಂದರೂ ರೋಗ ಬಾಧೆಯ ಕಾಟ ಶುಂಠಿ ಬೆಳೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಆತಂಕ ಮೂಡಿಸಿದೆ. ಕುಶಾಲನಗರ ತಾಲೂಕು ೮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ರೈತರು ತಮ್ಮ ಕೊಳವೆ ಬಾವಿಯ ನೀರನ್ನು ಬಳಕೆ ಮಾಡಿಕೊಂಡು ಶುಂಠಿ ಬೇಸಾಯ ಮಾಡಿರುತ್ತಾರೆ. ಶುಂಠಿ ಬಿತ್ತನೆ ಮಾಡಿ ೩ ತಿಂಗಳು ಕಳೆದು ಉತ್ತಮವಾಗಿ ಬೆಳೆದಿರುವುದು ಕಂಡುಬರುತ್ತದೆ. ಆದರೆ ಶುಂಠಿ ಜಮೀನಿನ ಮಧ್ಯ ಭಾಗದ ಕೆಲವು ಕಡೆಗಳಲ್ಲಿ ಮಹಾಕಾಳಿ, ಬೆಂಕಿರೋಗ ಸೇರಿದಂತೆ ಶುಂಠಿ ಬೆಳೆಯು ಹಳದಿ ಬಣ್ಣಕ್ಕೆ ತಿರುಗಿ ಒಣಗಿದ ಮಾದರಿಯಲ್ಲಿ ಬೆಳೆ ನಾಶವಾಗುತ್ತಿದೆ. ಈ ಬಾರಿ ಮಾರ್ಚ್ ತಿಂಗಳಲ್ಲಿ ಬಿತ್ತನೆ ಮಾಡಿದ ಶುಂಠಿ ಬೆಳೆಯು ಉತ್ತಮವಾಗಿ ಬಂದಿದ್ದು, ಅದೇ ರೀತಿಯಲ್ಲಿ ಈ ಬಾರಿ ಶುಂಠಿ ಬೆಳೆಗೆ ಉತ್ತಮವಾದ ಬೆಲೆಯೂ ಇದೆ. ರೋಗದ ಬಾಧೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ರೈತರು ಆತಂಕದಲ್ಲಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.