ನಾಪೋಕ್ಲು, ಜು. ೧೧ : ಯುವಕನೊಬ್ಬ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ಕುಂಬಳದಾಳು ಗ್ರಾಮದಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಕುಂಬಳದಾಳು ಗ್ರಾಮದ ನಿವಾಸಿ ದಿ. ಚಂದ್ರಶೇಖರ ಅವರ ಪುತ್ರ ಕವನ್ (ಕರುಂಬಯ್ಯ-೨೪) ಮೃತ ಯುವಕ.

ಪ್ರಾಥಮಿಕ ಮಾಹಿತಿಯ ಪ್ರಕಾರ ಮೃತ ಯುವಕ ಷೇರು (ಸ್ಟಾಕ್) ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿದ್ದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ನಿಖರ ಕಾರಣವೇನೆಂಬುದು ಇನ್ನೂ ದೃಢಪಟ್ಟಿಲ್ಲ. ದೆಹಲಿಯಲ್ಲಿ ಉನ್ನತ ವ್ಯಾಸಂಗ (ಐಎಎಸ್) ಮಾಡುತ್ತಿದ್ದ ಕವನ್ ಶುಕ್ರವಾರ ಸಂಜೆ ಕುಂಬಳದಾಳುವಿಗೆ ಬಂದಿದ್ದು ಬಳಿಕ ಡೆತ್ ನೋಟು ಬರೆದು ಅದರಲ್ಲಿ ಹಣದ ಸಮಸ್ಯೆ ಕುರಿತು ಪ್ರಸ್ತಾಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸೂರಜ್, ಸಿ ಐ ಉಮೇಶ್ ಕುಮಾರ್, ಸ್ಥಳೀಯ ಠಾಣಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.