ನಾಪೋಕ್ಲು, ಜು. ೧೧: ನಾಪೋಕ್ಲು - ಕೊಡವ ಸಮಾಜ-ಅಜ್ಜಿಮುಟ್ಟ-ಕೂರುಳಿ ರಸ್ತೆಯನ್ನು ವಿಸ್ತರಿಸುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಇದನ್ನು ವಿರೋಧಿಸಿ ಶನಿವಾರ ಇಲ್ಲಿನ ಕೊಡವ ಸಮಾಜದಲ್ಲಿ ಗ್ರಾಮಸ್ಥರು ಹಾಗೂ ಭೂ ಮಾಲೀಕರ ಸಭೆ ನಡೆಯಿತು.
ಸಭೆಯಲ್ಲಿ ಮಂಗಳೂರಿನ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿ ವಿಷಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಕಂಗAಡ ಜಾಲಿ ಪೂವಪ್ಪ, ಈ ರಸ್ತೆಯನ್ನು ಅಗಲೀಕರಣ ಮಾಡುವ ಅಗತ್ಯವಿಲ್ಲ ಎಂದರು. ನಾಪೋಕ್ಲುವಿನಿಂದ ಕೊಡವ ಸಮಾಜ, ಅಜ್ಜಿಮುಟ್ಟ ಹಾಗೂ ಕುರುಳಿ ಮಾರ್ಗವಾಗಿ ಎಮ್ಮೆಮಾಡುವಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸುಮಾರು ೨೫ ಅಡಿ ಅಗಲಕ್ಕೆ ವಿಸ್ತರಿಸುವ ಪ್ರಸ್ತಾವನೆಗೆ ನಮ್ಮ ತೀವ್ರ ವಿರೋಧವಿದೆ ಎಂದರು. ಇದಕ್ಕೆ ನೆರೆದಿದ್ದ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ರಸ್ತೆ ವಿಸ್ತರಣೆ ಮಾಡುವುದು ತಪ್ಪಲ್ಲ ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ರಸ್ತೆ ಅಗಲೀಕರಣ ಮಾಡಲು ಹೊರಟಿರುವುದರಿಂದ ಸಮಸ್ಯೆಯಾಗುತ್ತಿದೆ. ಈಗಿರುವ ರಸ್ತೆಯೇ ಉತ್ತಮ ಗುಣಮಟ್ಟದಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಪ್ರಸ್ತುತ ಸುಮಾರು ೧೫ ಅಡಿ ಅಗಲವಿರುವ ರಸ್ತೆಯನ್ನು ಅಗಲೀಕರಣ ಮಾಡುವ ಅಗತ್ಯವಿಲ್ಲ. ಬದಲಾಗಿ ಈಗಿರುವ ರಸ್ತೆಯನ್ನು ಉತ್ತಮ ಗುಣಮಟ್ಟದ ಡಾಂಬರು ಅಥವಾ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಿದರೆ ಸಾರ್ವಜನಿಕರ ಅಗತ್ಯವನ್ನು ಸಮರ್ಪಕವಾಗಿ ಪೂರೈಸಬಹುದು.
ಅನಗತ್ಯ ರಸ್ತೆ ಅಗಲೀಕರಣಕ್ಕಾಗಿ ನಮ್ಮ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಆದ್ದರಿಂದ ರಸ್ತೆ ಅಗಲೀಕರಣದ ಪ್ರಸ್ತಾವನೆಯನ್ನು ಕೈಬಿಟ್ಟು, ಯಾವುದೇ ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆ ಮಾಡದೆ ಈಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು. ಈ ಯೋಜನೆಯಿಂದ ನೇರವಾಗಿ ಪರಿಣಾಮ ಬೀರುವ ಭೂ ಮಾಲೀಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಹಾಗೂ ಅವರ ಅಭಿಪ್ರಾಯವನ್ನು ಪಡೆಯದೆ ಈ ಪ್ರಸ್ತಾವನೆ ಮಾಡಲಾಗಿದ್ದು, ಕೂಡಲೇ ಈ ಯೋಜನೆಯನ್ನು ಕೈಬಿಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಶಿವಚಾಳಿಯಂಡ ಸಹದೇವ, ಬೊಪ್ಪಂಡ ಕುಶಾಲಪ್ಪ, ಬೊಪ್ಪಂಡ ಶೈಲಾ ಬೋಪಯ್ಯ, ಪಾಡಿಯಮ್ಮಂಡ ಪಾಲಾಕ್ಷ, ಕೇಲೇಟಿರ ಗಣಪತಿ ಮಾತನಾಡಿದರು. ಸಭೆಯಲ್ಲಿ ಕಂಗAಡ, ಅರೆಯಡ, ಕೇಲೇಟಿರ ,ಶಿವಚಾಳಿಯಂಡ, ಬೊಪ್ಪಂಡ, ಪಾಡಿಯಮ್ಮಂಡ ಕುಟುಂಬಸ್ಥರು ಮತ್ತಿತರರು ಪಾಲ್ಗೊಂಡಿದ್ದರು.
- ದುಗ್ಗಳ ಸದಾನಂದ