ಕುಶಾಲನಗರ, ಜು. ೧೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಜ್ಞಾನಭಾರತಿ ಪ್ರೌಢಶಾಲೆ ಆಶ್ರಯದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ನಡೆಯಿತು.
ಉದ್ಘಾಟನೆಯನ್ನು ಮಾರುತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಎಲ್. ನಾಗರಾಜು ನೆರವೇರಿಸಿದರು. ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ವೈಯಕ್ತಿಕವಾಗಿ ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ತೊಂದರೆಯಾಗುತ್ತಿದೆ. ಇದರ ದುಷ್ಪರಿಣಾಮಗಳನ್ನು ತಡೆಗಟ್ಟಲು ಜಾಗೃತಿ ಕಾರ್ಯಕ್ರಮ ಮಾಹಿತಿ ಕಾರ್ಯಕ್ರಮ ಮಾಡುವ ಮೂಲಕ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉತ್ತಮ ಸಂದೇಶ ನೀಡಲಾಗುತ್ತಿದೆ ಎಂದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರು ಶುಭಾಶೀರ್ವಾದ ನೀಡಿದರು. ಪೊಲೀಸ್ ಅಧಿಕಾರಿ ಹೆಚ್.ಎನ್. ವೆಂಕಟೇಶ್ ಪ್ರಸನ್ನ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿ ವಿವಿಧ ರೀತಿಯ ಡ್ರಗ್ಸ್ ಸೇವನೆಯಿಂದ ಉಂಟಾಗುವ ಸಮಸ್ಯೆಗಳು ಮತ್ತು ಡ್ರಗ್ಸ್ ಸೇವನೆ ಮತ್ತು ಸಾಗಾಟಕ್ಕೆ ವಿಧಿಸುವ ಶಿಕ್ಷೆಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ಬಹಳ ಬೇಗನೆ ಈ ಚಟಕ್ಕೆ ದಾಸರಾಗುತ್ತಿದ್ದು ಗೆಳೆಯರ ಸಹವಾಸ, ಶೋಕಿ ಜೀವನ ಕಾರಣವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಪೂರೈಕೆ ವಿದೇಶದಿಂದ ಆಗುತ್ತಿದ್ದು ವಿದ್ಯಾರ್ಥಿಗಳ ಎಚ್ಚರಿಕೆ ಅಗತ್ಯವಾಗಿದೆ. ಮುಂದೆ ಉತ್ತಮ ಜೀವನ ನಡೆಸುವುದರ ಜೊತೆಗೆ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಾರಾಯಣ ಹೃದಯಾಲಯದ ಸಂಸ್ಥಾಪಕರು ಡಾ. ದೇವಿ ಪ್ರಸಾದ್ ಶೆಟ್ಟಿ ಸಂದೇಶ ನೀಡಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ವಿವಿಧ ರೋಗ ಲಕ್ಷಣಗಳಾದ ಹೃದಯ ಸಮಸ್ಯೆ, ಲಿವರ್ ಸಮಸ್ಯೆ, ಮಾನಸಿಕ ರೋಗ ಲಕ್ಷಣಗಳ ಬಗ್ಗೆ ತಿಳಿಸಿದರು. ಯೋಜನೆಯ ಒಕ್ಕೂಟ ಅಧ್ಯಕ್ಷೆ ಪಾರ್ವತಿ, ಶಿಕ್ಷಕರು ಸೌಮ್ಯ ಮತ್ತು ನಿಶ್ಚಿತ, ಮೇಲ್ವಿಚಾರಕರು ಸುಧೀರ್ ನೆಕ್ರಾಜೆ, ಸೇವಾ ಪ್ರತಿನಿಧಿ ಭಾಗ್ಯ ವೇದಿಕೆಯಲ್ಲಿ ಇದ್ದರು.