ಹನೋಯಿ, ಜು. ೧೧: ವಿಯೆಟ್ನಾಂನಲ್ಲಿ ನಡೆದ ದೋಣಿ ದುರಂತದಲ್ಲಿ ೧೫ ಭಾರತೀಯ ಪ್ರವಾಸಿಗರು ಮೃತಪಟ್ಟಿರುವ ಘಟನೆ ನಡೆದಿದೆ. ದೋಣಿಯಲ್ಲಿ ಒಟ್ಟು ೩೬ ಪ್ರವಾಸಿಗರು ಇದ್ದರು.
ಅಲ್ಲದೆ, ನಾಲ್ವರು ಸಿಬ್ಬಂದಿ ಕೂಡಾ ಇದ್ದರು. ಈ ಪೈಕಿ ೧೫ ಮಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ. ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಬಳಿ ಶನಿವಾರ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಗುಚಿ ಈ ದುರಂತ ಸಂಭವಿಸಿದೆ. ಮೃತಪಟ್ಟವರ ಪೈಕಿ ೧೩ ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ೨೧ ಮಂದಿ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ಭಾರತೀಯ ರಾಯಭಾರ ಕಚೇರಿ ತುರ್ತು ನಿಯಂತ್ರಣ ಕೊಠಡಿಯನ್ನು ಆರಂಭಿಸಿದೆ. ಸದ್ಯಕ್ಕೆ ಸಿಕ್ಕ ಮಾಹಿತಿಯ ಪ್ರಕಾರ ದೋಣಿಯಲ್ಲಿ ೩೨ ಮಂದಿ ಭಾರತೀಯ ಪ್ರವಾಸಿಗರಿದ್ದರು. ಅಲ್ಲದೆ, ಮೂವರು ಸಿಬ್ಬಂದಿ ಮತ್ತು ಒಬ್ಬ ಅಟೆಂಡೆAಟ್ ಸೇರಿದಂತೆ ಒಟ್ಟು ೩೬ ಜನರಿದ್ದರು.
ಸಮುದ್ರದಲ್ಲಿ ಭಾರೀ ಗಾತ್ರದ ಅಲೆಯ ಹೊಡೆತಕ್ಕೆ ಈ ದುರಂತ ಸಂಭವಿಸಿದೆ. ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿದೆ.
ಹಾನ್ ಮೇ ರುಟ್ ನ್ಗೋಯ್' ದ್ವೀಪದಿಂದ 'ಆನ್ ಥೋಯ್' ಬಂದರಿಗೆ ಹೊರಟ ಕೆಲ ಅವಧಿಯಲ್ಲೇ ಈ ದುರಂತ ಸಂಭವಿಸಿದೆ. ಪರಿಣಾಮ ಬೋಟ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ನೀರಿನಲ್ಲಿ ಮುಳುಗಿದ್ದಾರೆ. ಈ ಪೈಕಿ ೨೧ ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, “ವಿಯೆಟ್ನಾಂನ ಫೂ ಕ್ವೋಕ್ ಬಳಿ ಭಾರತೀಯ ನಾಗರಿಕರು ಸಿಲುಕಿರುವ ಬೋಟ್ ಅಪಘಾತದ ದುರಂತದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಗಾಯಗೊಂಡಿರುವ, ಬದುಕುಳಿದವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.
ನಮ್ಮ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿವೆ. ನಮ್ಮ ಅಧಿಕಾರಿಗಳು ವಿಯೆಟ್ನಾಂ ಅಧಿಕಾರಿಗಳೊಂದಿಗೂ ನಿಕಟ ಸಂಪರ್ಕದಲ್ಲಿದ್ದಾರೆ” ಎಂದಿದ್ದಾರೆ.