ವೀರಾಜಪೇಟೆ, ಜು. ೧೧: ವೀರಾಜಪೇಟೆ ಪುರಸಭೆ ಗಾಂಧಿನಗರದಲ್ಲಿ ಮತದಾರರ ಪಟ್ಟಿ ಎಸ್‌ಐಆರ್ ಪರಿಷ್ಕರಣೆ ವೇಳೆ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಆರೋಪಿಸಿದ್ದಾರೆ.

ಪುರಸಭೆ ಮಾಜಿ ಮಹಿಳಾ ಸದಸ್ಯೆ ಮನೆಯಲ್ಲಿ ಗಾಂಧಿನಗರದ ೮೦ಕ್ಕೂ ಅಧಿಕ ಮತದಾರರ ಅರ್ಜಿ ನಮೂನೆಗಳನ್ನು ಇಟ್ಟುಕೊಂಡಿದ್ದಾರೆ. ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ರೆವೆನ್ಯೂ ಇನ್ಸ್ಪೆಕ್ಟರ್ ಅವರಿಗೆ ದೂರು ನೀಡಲಾಗಿದೆ. ಚುನಾವಣಾ ಅಧಿಕಾರಿಗಳು, ಪೊಲೀಸ್ ಇಲಾಖೆ, ತಾಲೂಕು ದಂಡಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ಬಿಎಲ್‌ಓಗಳು ಒತ್ತಡ ರಹಿತವಾಗಿ ಕೆಲಸ ಮಾಡುವಂತಾಗಬೇಕು. ಅರ್ಜಿಗಳು ಮಾಜಿ ಸದಸ್ಯೆ ಮನೆಗೆ ಯಾವ ರೀತಿ ಹೋದವು ಎಂಬದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ವೀರಾಜಪೇಟೆ ಶಾಸಕರ ಗಮನಕ್ಕೂ ತರಲು ಪ್ರಯತ್ನಿಸಿದ್ದು, ದೂರವಾಣಿ ಕರೆ ಸ್ವೀಕರಿಸಿಲ್ಲ ಎಂದು ಮಂಜುನಾಥ್ ಹೇಳಿದ್ದಾರೆ.