ಸೋಮವಾರಪೇಟೆ, ಜು. ೧೧: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ೮ ಕೋಟಿ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಗೌಡಳ್ಳಿ, ಚಿಕ್ಕಾರ, ಕೂಗೂರು ಮಾರ್ಗದ ಚಿಕ್ಕಾರ ಗ್ರಾಮದ ರಸ್ತೆಯಲ್ಲಿ ನಿರ್ಮಿಸಿರುವ ೬೦ಲಕ್ಷ ರೂ. ವೆಚ್ಚದ ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಗತಿಪರ ರಸ್ತೆ ಯೋಜನೆಯಲ್ಲಿ ಗೌಡಳ್ಳಿ, ಚಿಕ್ಕಾರ, ಹಿರಿಕರ, ಬೀಟಿಕಟ್ಟೆ ರಸ್ತೆ ಕಾಮಗಾರಿಗೆ ೪.೨೫ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಗ್ರಾಮದೊಳಗೆ ರಸ್ತೆ ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಅವಶ್ಯಕವಿರುವಷ್ಟು ಜಾಗವನ್ನು ಬಿಟ್ಟುಕೊಟ್ಟು, ಅಗಲವಾದ ರಸ್ತೆಯನ್ನು ಮಾಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಗ್ರಾಮಸ್ಥರು, ತಮ್ಮ ಗ್ರಾಮದ ಉದ್ದಾರಕ್ಕಾಗಿ ಕೊಡುಗೆ ರೂಪದಲ್ಲಿ ಸ್ವಲ್ಪ ಜಾಗವನ್ನು ಬಿಟ್ಟುಕೊಡಬೇಕು ಎಂದು ಸಲಹೆ ನೀಡಿದರು. ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಅಗಲವಾದ ರಸ್ತೆ ಮಾಡಲಾಗಿದೆ. ಇಂತಹ ರಸ್ತೆಗಳನ್ನು ಮಾಡಲು ಗ್ರಾಮಸ್ಥರ ಸಹಕಾರವೇ ಮುಖ್ಯವಾಗಿದೆ ಎಂದು ಹೇಳಿದರು. ತನ್ನ ಅಧಿಕಾರಾವಧಿಯಲ್ಲಿ ಮುಂದೆಯೂ ಹೆಚ್ಚಿನ ಅನುದಾನ ನೀಡಲಾಗುವುದು. ಗ್ರಾಮಗಳಿಗೆ ಭೇಟಿ ನೀಡಿ ಜನರ ಬೇಡಿಕೆಯ ಪಟ್ಟಿಯನ್ನು ತಯಾರಿಸಿಕೊಂಡು, ಸರ್ಕಾರದಿಂದ ಅನುದಾನ ತರುವ ಪ್ರಯತ್ನ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಈ ಸಂದರ್ಭ ಚಿಕ್ಕಾರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸುನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಹಿರಿಯ ಕಾಂಗ್ರೆಸಿಗ ಕೂಗೂರು ಜಯಪ್ಪ, ಕಾಂಗ್ರೆಸ್‌ನ ಪ್ರಮುಖರಾದ ಲೋಕೇಶ್ ಕುಮಾರ್, ಸುರೇಶ್, ಪ್ರಸಾದ್, ವಸಂತ್ ಕುಮಾರ್, ಲಾರೆನ್ಸ್, ಚೇತನ್, ಅಬ್ದುಲ್ ರಜಾಕ್, ಗೌಡಳ್ಳಿ ಮಹೇಶ್, ಸುಮಂತ್, ಆಶೋಕ್, ವೆಂಕಟೇಶ್, ರಾಮಚಂದ್ರ ಮತ್ತಿತರರು ಇದ್ದರು.