ವೀರಾಜಪೇಟೆ, ಜು. ೧೧: ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಜನುಮದಿನದ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಸಂತ ಅನ್ನಮ್ಮ ಚರ್ಚ್ಹಾಲ್ ಸಭಾಂಗಣದಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ಹಾಗೂ ಪುಸ್ತಕ ಮತ್ತು ಆ್ಯಪ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಸಕ ಪೊನ್ನಣ್ಣ ಅವರು ಉತ್ತಮ ವ್ಯಕ್ತಿಯಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೆ ನೂರಾರು ಕೋಟಿ ಅನುದಾನ ತಂದಿದ್ದಾರೆ. ಜನರ ಸೇವೆಯಲ್ಲಿರುವ ಇವರಿಗೆ ಮುಂದೆ ಸಚಿವ ಸ್ಥಾನ ದೊರಕುವಂತಾಗಲಿ ಎಂದು ಶುಭ ಹಾರೈಸಿದರು. ಶಾಸಕ ಪೊನ್ನಣ್ಣ ಅವರು ವೇದಿಕೆಯಲ್ಲಿ ಎ.ಎಸ್.ಪಿ. ಮೈ ಆ್ಯಪ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿ ಈ ಆ್ಯಪ್‌ನಿಂದ ನನ್ನೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬಹುದು ಎಂದರಲ್ಲದೆ ೨೦೨೦ ರಿಂದ ನನ್ನ ತಂದೆ ಮತ್ತು ತಾಯಿ ಹೆಸರಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಸಹಾಯ ಹಸ್ತ ನೀಡುತ್ತಿದ್ದು ಹಾಗೂ ಪ್ರತಿ ದಿನ ಜಾತಿ ಧರ್ಮ ಬೇಧವಿಲ್ಲದೆ ಬಡವ ಕಾರ್ಮಿಕರು ಸೇರಿದಂತೆ ಜನರ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಹುಟ್ಟುಹಬ್ಬದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ೭೦೦ ಕೊಡೆಗಳನ್ನು ವಿತರಿಸಿದರು.
ವೇದಿಕೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ‘ವಾಗ್ದಾನ ಅನುಷ್ಠಾನ’ ಜನತಾ ನ್ಯಾಯಾಲಯದಲ್ಲಿ ೩ನೇ ಅಫಿಡವಿಟ್’ ಎಂಬ ಪುಸ್ತಕವನ್ನು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು. ಪ್ರಾಸ್ತಾವಿಕವಾಗಿ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅತಿಥಿಗಳಾಗಿ ಕಾಂಚನ ಪೊನ್ನಣ್ಣ, ನರೇನ್ ಕಾರ್ಯಪ್ಪ, ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಜೇಮ್ಸ್ ಡೊಮೆನಿಕ್ ಹಾಗೂ ಪಕ್ಷದ ಮುಖಂಡರಾದ ಎಂ.ಎಸ್. ಪೂವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾಳೇಟಿರ ಬೋಪಣ್ಣ, ಲೋಕೇಶ್ ಕುಮಾರ್, ಕೊಲ್ಲಿರ ಗಿರೀಶ್, ಎಸ್.ಹೆಚ್. ಮತೀನ್, ಎಂ.ಕೆ. ದೇಚಮ್ಮ ಕೆ.ಸಿ. ಶಭರೀಶ್, ಎಂ.ಎA. ಶಶಿಧರನ್ ಸೇರಿದಂತೆ ಇತರರು ಇದ್ದರು.