ನಾಪೋಕ್ಲು, ಜು. ೧೨: ಇಲ್ಲಿಗೆ ಸಮೀಪದ ಮೂರ್ನಾಡು - ಬಲಮುರಿ ರಸ್ತೆಉದ್ದಕ್ಕೂ ಬೆಳೆದಿದ್ದ ಕಾಡು ಗಿಡಗಂಟಿಗಳು ವಿದ್ಯುತ್ ಲೈನ್‌ಗೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್‌ಗಳಾದ ಕಿಶೋರ್ ಮತ್ತು ಜೀವನ್ ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.

ಪಾರಾಣೆ ಗ್ರಾಮ ಪಂಚಾಯಿತಿ ಪಿಡಿಓ ಬಿದ್ದಪ್ಪ ಎನ್.ಎನ್. ಮತ್ತು ಸಿಬ್ಬಂದಿ ಹೈದರ ಎನ್.ಎಂ. ಅವರು ಭೇಟಿ ನೀಡಿದ್ದರು. ಈ ವೇಳೆ ಬಲಮುರಿಯಿಂದ ನಾಪೋಕ್ಲು - ಪಾರಾಣೆಗೆ ಹೋಗುವ ರಸ್ತೆಉದ್ದಕ್ಕೂ ಕಾಡು ಬೆಳೆದು ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿರುವುದರಿಂದ ಕಾಡು ಕಡಿದು ಸ್ವಚ್ಛಗೊಳಿಸಬೇಕೆಂದು ಗ್ರಾಮಸ್ಥರಿಂದ ಮನವಿ ಮಾಡಲಾಯಿತು. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್, ಗಾಜು ಮತ್ತಿತರ ತ್ಯಾಜ್ಯಗಳನ್ನು ಎಸೆಯುತ್ತಿದ್ದು ಇದರಿಂದ ನದಿ ಮಲಿನ ಆಗುವುದರ ಜೊತೆಗೆ ಗ್ರಾಮದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಉದ್ದಕ್ಕೂ ಎಚ್ಚರಿಕೆಯ ನಾಮಫಲಕ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಂಚಾಯಿತಿ ಅಧಿಕಾರಿ ಬಿದ್ದಪ್ಪ ಭರವಸೆ ನೀಡಿದರು.