ಸೋಮವಾರಪೇಟೆ,ಜು.೧೨ : ರೈತರ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಕೊಡಗು ಸೇರಿದಂತೆ ಇತರೆಡೆಯ ಎಲ್ಲಾ ರೈತರು ಸರ್ಕಾರದ ವಿರುದ್ಧ ಬೃಹತ್ ಮಟ್ಟದ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು.

ರಾಮನಗರ ಜಿಲ್ಲೆಯ ಬಿಡದಿಯ ಭೈರಮಂಗಲದಲ್ಲಿ ನಡೆದ ಬಲವಂತದ ಭೂ ಸ್ವಾಧೀನವನ್ನು ವಿರೋಧಿಸಿ 'ಬಿಡದಿ ಚಲೋ' ಹಾಗೂ ಸಾಮೂಹಿಕ ನಾಯಕತ್ವದ ರೈತ ಹೋರಾಟ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಡಗಿನ ರೈತರ ಸಮಸ್ಯೆಯಾಗಿರುವ ಸಿ ಮತ್ತು ಡಿ ಸಮಸ್ಯೆಯನ್ನು ಬಗೆ ಹರಿಸಿ ಖಾತೆ ನೀಡುವ ಬದಲು ಬಿಡದಿ ಭಾಗದ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಭೂಮಿಯನ್ನು ಕಸಿದುಕೊಂಡು ಟೌನ್‌ಶಿಪ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು . ರೈತರ ಬದುಕಿನ ಆಧಾರವಾಗಿರುವ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳಲು ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು.

ಬಿಡದಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕೊಡಗಿನ ಎಲ್ಲಾ ರೈತರ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ ಅವರು,ಕೊಡಗಿನ ಸೋಮವಾರಪೇಟೆ, ಮಡಿಕೇರಿ ಸೇರಿದಂತೆ ಮಲೆನಾಡು ಭಾಗದ ವಿವಿಧ ಭಾಗಗಳಲ್ಲಿ ಹಲವು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಸಿ ಮತ್ತು ಡಿ ಭೂಮಿ ಸಮಸ್ಯೆಯನ್ನು ಸರ್ಕಾರ ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು. ರೈತರು ಸಾಗುವಳಿ ಮಾಡುತ್ತಿರುವ ಭೂಮಿಗೆ ಹಕ್ಕು ನೀಡುವ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಹೇಳಿದರು. ಬಿಡದಿಯಲ್ಲಿ ನಡೆದ ಸಭೆಯಲ್ಲಿ

ರೈತ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್, ರೈತ ಹೋರಾಟ ಸಮಿತಿಯ ದಿವಾಕರ್ ಕೂತಿ, ಯೋಗೇಂದ್ರ ಚೌಡ್ಲು, ದೇವರಾಜ್, ಕೂತಿ ಗ್ರಾಮಾಧ್ಯಕ್ಷ ಜಯರಾಮ್, ಕೆ.ಡಿ. ಗಿರೀಶ್, ಶುಂಠಿ ಪೃಥ್ವಿ, ಪ್ರಕಾಶ್ ಸೇರಿದಂತೆ ರೈತರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.