ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು, ಜು. ೧೨: ಮೊದಲ ಪತ್ನಿಯೊಂದಿಗೆ ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯುವ ಮುನ್ನವೇ ನಡೆದ ಎರಡನೇ ವಿವಾಹವು ಕಾನೂನಿನ ಪ್ರಕಾರ ಅಸಿಂಧುವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ಪ್ರಕರಣಗಳಲ್ಲಿ ಗಂಡ ಎರಡನೇ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಪ್ರತ್ಯೇಕವಾಗಿ ದಾವೆ ಹೂಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಹಿಳೆಯೊಬ್ಬರು ಸಲ್ಲಿಸಿದ್ದ ಎರಡು ಪ್ರತ್ಯೇಕ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಹಿಂದೂ ವಿವಾಹ ಕಾಯ್ದೆ-೧೯೫೫ರ ಸೆಕ್ಷನ್ ೫ ಮತ್ತು ೧೧ರ ಪ್ರಕಾರ, ಮೊದಲ ಪತ್ನಿ ಜೀವಂತವಾಗಿರುವಾಗ ಅಥವಾ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ನಡೆಯುವ ಯಾವುದೇ ಎರಡನೇ ವಿವಾಹವು ಅಸಿಂಧುವಾಗುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ವಿವಾಹ ರದ್ದತಿ ದಾವೆ ಹೂಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ವಿಚಾರಣೆಯಲ್ಲಿ ತುಮಕೂರಿನ ಕೌಟುಂಬಿಕ ನ್ಯಾಯಾಲಯವು, ದಂಪತಿಯ ವಿವಾಹವು ೨೦೧೮ರ ನವೆಂಬರ್ ೨೧ರಂದು ನಡೆದಿರುವುದು ಸತ್ಯವಾಗಿದ್ದು, ಆ ಸಂದರ್ಭದಲ್ಲಿ ಪತಿಯ ಮೊದಲ ಪತ್ನಿ ಜೀವಂತವಾಗಿದ್ದ ಕಾರಣ ಈ ವಿವಾಹ ಅಸಿಂಧು ಎಂದು ಒಪ್ಪಿಕೊಂಡಿತ್ತು.
ಆದರೆ, ವಿವಾಹ ರದ್ದತಿಗಾಗಿ ಅರ್ಜಿದಾರರು ಪ್ರತ್ಯೇಕ ಸಿವಿಲ್ ಪ್ರಕರಣ ದಾಖಲಿಸಬಹುದು ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ನಿರ್ದೇಶನ ಕಾನೂನುಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಈ ವಿವಾಹವನ್ನು ಸಂಪೂರ್ಣ ಅಸಿಂಧು ಎಂದು ಘೋಷಿಸಿತು. ಅಲ್ಲದೆ, ಅರ್ಜಿದಾರರು ಮಾಸಿಕ ಪರಿಹಾರ ಹಾಗೂ ಜೀವನಾಂಶಕ್ಕಾಗಿ ಕೆಳಹಂತದ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿತು.
ತುಮಕೂರು ಮೂಲದ ವ್ಯಕ್ತಿಯೊಬ್ಬರು ಅರ್ಜಿದಾರ ಮಹಿಳೆಯನ್ನು ೨೦೧೮ರ ನವೆಂಬರ್ ೨೧ರಂದು ಎರಡನೇ ವಿವಾಹವಾಗಿದ್ದರು. ಆದರೆ, ಆ ಸಮಯದಲ್ಲಿ ಆ ವ್ಯಕ್ತಿಯ ಮೊದಲ ವಿವಾಹದ ಸಂಬAಧ ಮುಂದುವರಿದಿತ್ತು. ನಂತರ ೨೦೧೯ರ ಜೂನ್ ೧೩ರಂದು ಮೊದಲ ಪತ್ನಿಗೆ ವಿಚ್ಛೇದನ ನೀಡಲಾಗಿತ್ತು.
ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಮೂರು ದಿನಗಳ ನಂತರ ಅಂದರೆ ೨೦೧೯ರ ಜೂನ್ ೧೬ರಂದು ಎರಡನೇ ವಿವಾಹ ನಡೆದಿರುವಂತೆ ದಾಖಲೆ ಸೃಷ್ಟಿಸಲು ಪ್ರಯತ್ನಿಸಲಾಗಿತ್ತು ಎಂದು ಅರ್ಜಿದಾರರು ಆರೋಪಿಸಿದ್ದರು. ನಂತರ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರೂ ಪರಸ್ಪರ ವಿಚ್ಛೇದನ ಕೋರಿ ತುಮಕೂರು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ಮೊದಲ ಪತ್ನಿಯೊಂದಿಗೆ ವಿವಾಹ ಸಂಬAಧ ಮುಂದುವರಿದಿದ್ದಾಗಲೇ ಎರಡನೇ ಮದುವೆ ನಡೆದಿರುವುದು ಬೆಳಕಿಗೆ ಬಂದಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ಬಳಿಕ ಹೈಕೋರ್ಟ್ ಎರಡನೇ ವಿವಾಹವನ್ನು ಸಂಪೂರ್ಣ ಅಸಿಂಧು ಎಂದು ಘೋಷಿಸಿದೆ.