ಪೊನ್ನಂಪೇಟೆ, ಜು.೧೬: ಸಾಮಾಜಿಕ ಜಾಲತಾಣ ಮತ್ತು ವಾಟ್ಸಾö್ಯಪ್ ಮೂಲಕ ಮಹಿಳೆಗೆ ಹಣಕ್ಕಾಗಿ ಬೆದರಿಕೆ ಹಾಕಿ, ಅಶ್ಲೀಲವಾಗಿ ತಿರುಚಿದ ಭಾವಚಿತ್ರ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಆರೋಪಿಗೆ ಪೊನ್ನಂಪೇಟೆ ನ್ಯಾಯಾಲಯ ಒಂದು ವರ್ಷದ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
೨೦೨೩ರ ಮೇ ೭ರಿಂದ ಜೂನ್ ೨೧ರವರೆಗೆ ಕಾನೂರು ಜಂಕ್ಷನ್ನಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದ ದೂರುದಾರೆ ದೇಚಮ್ಮ ಅವರಿಗೆ ಆರೋಪಿ ನೌಷದ್ ಪಿ.ಎ. ಎಂಬಾತ ವಾಟ್ಸಾö್ಯಪ್ ಮೂಲಕ ಸಂದೇಶ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ. ಹಣ ನೀಡದಿದ್ದರೆ ದೂರುದಾರೆಯ ಭಾವಚಿತ್ರ ಮತ್ತು ವೀಡಿಯೋವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ದೂರುದಾರೆಯ ಪತಿಯ ಫೇಸ್ಬುಕ್ ಖಾತೆಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿ ಹಣಕ್ಕಾಗಿ ಒತ್ತಾಯಿಸಿದ್ದ ಎಂಬ ಪ್ರಕರಣದ ತನಿಖೆ ನಡೆಸಿದ ಪೊನ್ನಂಪೇಟೆ ಪೊಲೀಸ್ ಠಾಣೆಯ ತನಿಖಾಧಿಕಾರಿ ಪ್ರಮೀಳಾ ವಿ.ಆರ್. ಅವರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೩೫೪(ಡಿ), ೫೦೯ ಹಾಗೂ ೫೦೬ರಡಿ ದೋಷಾರೋಪಣಾ ಪಟ್ಟಿಯನ್ನು ಪೊನ್ನಂಪೇಟೆ ಸಿವಿಲ್ ಜಡ್ಜ್ (ಕಿರಿಯ ವಿಭಾಗ) ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀನಾಥ್ ಎ. ಅವರು ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಕಲಂ ೩೫೪(ಡಿ) ಅಡಿಯಲ್ಲಿ ಒಂದು ವರ್ಷದ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ರೂ. ೩,೦೦೦ ದಂಡ, ಕಲಂ ೫೦೬ರಡಿ ಒಂದು ವರ್ಷದ ಸಾಧಾರಣ ಕಾರಾಗೃಹ ಶಿಕ್ಷೆ ಮತ್ತು ಕಲಂ ೫೦೯ರಡಿ ಒಂದು ವರ್ಷದ ಸಾಧಾರಣ ಕಾರಾಗೃಹ ಶಿಕ್ಷೆಯೊಂದಿಗೆ ರೂ.೩,೦೦೦ ದಂಡ ವಿಧಿಸಿದ್ದಾರೆ.
ದಂಡ ಪಾವತಿಸಲು ವಿಫಲವಾದಲ್ಲಿ ಒಂದು ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರತ್ನಾಕರ್ ಅವರು ವಾದ ಮಂಡಿಸಿದ್ದರು.