ಕೊಡ್ಲಿಪೇಟೆ, ಜು. ೧೬: ದೈನಂದಿನ ಆಗುಹೋಗುಗಳನ್ನು ಜನರಿಗೆ ತಿಳಿಸುವುದರೊಂದಿಗೆ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾಗಿದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಮಠಾಧೀಶರಾದ ಶ್ರೀ ಮಹಾಂತ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಕೊಡ್ಲಿಪೇಟೆಯ ಶ್ರೀ ನಂಜುAಡಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾಲ್ಕು ದಿಕ್ಕುಗಳಲ್ಲಿ ನಡೆಯುವ ಘಟನೆಗಳು, ಬೆಳವಣಿಗೆಗಳು ಹಾಗೂ ಸಮಾಜದ ವಿವಿಧ ವಿಚಾರಗಳನ್ನು ಒಂದೆಡೆ ತಂದು ಜನರಿಗೆ ತಲುಪಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದ ಅವರು, ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾರ್ವಜನಿಕರು ಪತ್ರಿಕೆಗಳನ್ನು ಖರೀದಿಸಿ ಓದುವ ಮೂಲಕ ಮಾಧ್ಯಮಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕಿ ಸವಿತಾ ರೈ ಮಾತನಾಡಿ, ನಿಖರ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ಸಮಾಜಕ್ಕೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿಯೂ ಬಳಕೆಯಾಗುತ್ತಿದೆ. ಆದರೂ ಪತ್ರಿಕೆಯ ಮಹತ್ವವನ್ನು ವಿದ್ಯಾರ್ಥಿಗಳು ಮೊದಲು ಅರಿತುಕೊಳ್ಳಬೇಕು. ಪ್ರತಿದಿನ ಸುದ್ದಿಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ಪತ್ರಕರ್ತ ಎಸ್. ಮಹೇಶ್ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಪತ್ರಿಕೆಗಳ ಮೂಲಕ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಜವಾಬ್ದಾರಿಯನ್ನು ಮಾಧ್ಯಮಗಳು ನಿರ್ವಹಿಸುತ್ತಿವೆ. ಪತ್ರಿಕೆಗಳು ಕೇವಲ ಸುದ್ದಿಮಾಧ್ಯಮವಲ್ಲ, ಅವುಗಳಲ್ಲಿ ಬರುವ ಸುದ್ದಿಗಳು ಭವಿಷ್ಯಕ್ಕೆ ದಾಖಲೆಯಾಗಿ ಉಳಿಯುತ್ತದೆ ಎಂದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ೫ ರಿಂದ ೭ನೇ ತರಗತಿ ವಿಭಾಗದಲ್ಲಿ ಚಿಂತನ ಡಿ.ಎನ್. ಪ್ರಥಮ, ಬಿಲ್ವಿಕ ಎಸ್.ಜಿ. ದ್ವಿತೀಯ ಹಾಗೂ ವರ್ಷಿತಾ ಕೆ.ಆರ್. ತೃತೀಯ ಸ್ಥಾನ ಪಡೆದರು. ೮ ರಿಂದ ೧೦ನೇ ತರಗತಿ ವಿಭಾಗದಲ್ಲಿ ಮೋಕ್ಷ ಹೆಚ್.ಎಂ. ಪ್ರಥಮ, ಸಾನಿಕ ಡಿ. ದ್ವಿತೀಯ ಹಾಗೂ ಜವೇರಿಯ ತೃತೀಯ ಸ್ಥಾನ ಗಳಿಸಿದರು.
ಪತ್ರಕರ್ತ ಎಸ್. ಮಹೇಶ್, ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಹಿರಿಕರ ರವಿ ಹಾಗೂ ಲಕ್ಷ್ಮೀಕಾಂತ್ ಕೊಮಾರಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಮುಳ್ಳೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವ ಕುಂಬೂರು, ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಅಭಿಲಾಶ್, ಸಂಸ್ಥೆಯ ಕಾರ್ಯದರ್ಶಿ ದಿವಾಕರ್ ಅವರುಗಳು ಉಪಸ್ಥಿತರಿದ್ದು ಮಾತನಾಡಿದರು. ವಿಜಯ್ ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ವಿದ್ಯಾರ್ಥಿನಿ ಹಿತಾಶ್ರೀ ಕಾರ್ಯಕ್ರಮ ನಿರೂಪಿಸಿದರು.