ಕೂಡಿಗೆ, ಜು. ೧೬: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಕೂಡಿಗೆ ಡೈರಿ ಸರ್ಕಲ್ನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮಹತ್ವ ಹಾಗೂ ಸಂಚಾರಿ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ ಮಾತನಾಡಿ, ಯುವಕರು ಸೇರಿದಂತೆ ಎಲ್ಲ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಮ್ಮ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ವಾಹನ ಚಾಲಕರು ತಮ್ಮ ವಾಹನಗಳ ಅಗತ್ಯ ದಾಖಲೆಗಳು, ಚಾಲನಾ ಪರವಾನಗಿ, ವಿಮೆ ಹಾಗೂ ಇತರೆ ಸಂಬAಧಿತ ದಾಖಲೆಗಳನ್ನು ನಿಯಮಾನುಸಾರ ಹೊಂದಿರಬೇಕು. ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಅವರು ತಿಳಿಸಿದರು.
ಈ ವೇಳೆ “ಹೆಲ್ಮೆಟ್ ಧರಿಸಿ - ಜೀವ ರಕ್ಷಿಸಿಕೊಳ್ಳಿ” ಎಂಬ ಸಂದೇಶವುಳ್ಳ ಕರಪತ್ರಗಳನ್ನು ದ್ವಿಚಕ್ರ ವಾಹನ ಸವಾರರಿಗೆ ವಿತರಿಸಿ ಸುರಕ್ಷಿತ ಚಾಲನೆಯ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಅಪರಾಧ ವಿಭಾಗದ ಠಾಣಾಧಿಕಾರಿ ಸ್ವಾಮಿ, ಸಹಾಯಕ ಠಾಣಾಧಿಕಾರಿ ವಿಜಯ್, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.