ಪೊನ್ನಂಪೇಟೆ, ಜು. ೧೬: ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೆ ಕಾರಣವಾದ ಆರೋಪಿಗೆ ಪೊನ್ನಂಪೇಟೆ ನ್ಯಾಯಾಲಯವು ೬ ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ರೂ. ೧೧ ಸಾವಿರ ದಂಡ ವಿಧಿಸಿದೆ.

೨೦೨೩ರ ನವೆಂಬರ್ ೨೨ ರಂದು ಬೆಳಿಗ್ಗೆ ೧೦.೩೦ ರ ಸುಮಾರಿಗೆ ಬಾಳೆಲೆ ಕಡೆಯಿಂದ ಪೊನ್ನಂಪೇಟೆ ಕಡೆಗೆ ವ್ಯಾಗನರ್ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಬೋಸ್ ಮಂದಣ್ಣ ಅವರು ಎದುರಿನಿಂದ ಶಶಿಕುಮಾರ್ ಎಂಬವರು ಬರುತ್ತಿದ್ದ ಯಮಹಾ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಶಿಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊನ್ನಂಪೇಟೆ ಪೊಲೀಸ್ ಠಾಣೆಯ ತನಿಖಾಧಿಕಾರಿ ಗೋವಿಂದರಾಜು ಎಂ.ವಿ. ಅವರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೨೭೯ ಹಾಗೂ ೩೦೪(ಎ) ಅಡಿಯಲ್ಲಿ ದೋಷಾರೋಪಣಾ ಪತ್ರವನ್ನು ಪೊನ್ನಂಪೇಟೆ ಸಿವಿಲ್ ಜಡ್ಜ್ (ಕಿರಿಯ ವಿಭಾಗ) ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀನಾಥ್ ಎ. ಅವರು ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಲಂ ೩೦೪(ಎ) ಅಡಿಯಲ್ಲಿ ೬ ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ರೂ. ೧೦,೦೦೦ ದಂಡ ವಿಧಿಸಿದ್ದಾರೆ. ಜೊತೆಗೆ ಕಲಂ ೨೭೯ ರಡಿ ರೂ. ೧,೦೦೦ ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ೧೫ ದಿನಗಳ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರತ್ನಾಕರ್ ಅವರು ವಾದ ಮಂಡಿಸಿದ್ದರು.