ಸುಂಟಿಕೊಪ್ಪ, ಜು. ೧೬: ಉತ್ತಮ ಆರೋಗ್ಯಕ್ಕಾಗಿ ಆಹಾರ ಹಾಗೂ ಜೀವನಶೈಲಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ನಾವು, ವಾಹನ ಚಾಲನೆ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರುವುದು ವಿಷಾದನೀಯ ಎಂದು ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ದಿನೇಶ್‌ಕುಮಾರ್ ಹೇಳಿದರು.

ಸುಂಟಿಕೊಪ್ಪ ವಾಹನ ಚಾಲಕರ ಹಾಗೂ ಆಟೋ ಮಾಲೀಕರ-ಚಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.

ಹೆಲ್ಮೆಟ್ ಧರಿಸಿದರೆ ಕೂದಲು ಕೆಡುತ್ತದೆ ಅಥವಾ ಉದುರುತ್ತದೆ ಎಂಬ ಕಾರಣಗಳನ್ನು ಮುಂದಿಟ್ಟು ಸುರಕ್ಷತೆಯನ್ನು ನಿರ್ಲಕ್ಷಿಸಬಾರದು. ನಿಮ್ಮ ಕುಟುಂಬ ನಿಮ್ಮನ್ನೇ ನಂಬಿ ಬದುಕುತ್ತಿದೆ ಎಂಬ ಅರಿವು ಪ್ರತಿಯೊಬ್ಬ ಚಾಲಕರಲ್ಲಿರಬೇಕು. ಆರೋಗ್ಯಕ್ಕಾಗಿ ವ್ಯಾಯಾಮ ಮತ್ತು ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡುವಂತೆ, ಜೀವ ರಕ್ಷಿಸುವ ಹೆಲ್ಮೆಟ್ ಧರಿಸುವುದಕ್ಕೂ ಅಷ್ಟೇ ಮಹತ್ವ ನೀಡಬೇಕು ಎಂದು ಅವರು ಹೇಳಿದರು.

ರಸ್ತೆ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದು ಜೀವಹಾನಿಯಾಗುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್, ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಶರೀಫ್, ಕಾರ್ಯದರ್ಶಿ ಸಚಿನ್, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಎಂ. ಪೂವಪ್ಪ, ಎ. ಹಂಸ, ಬಿ.ಎ. ತಿಮ್ಮಪ್ಪ, ಇಸ್ಮಾಯಿಲ್, ಕೃಷ್ಣಪ್ಪ ಸೇರಿದಂತೆ ಆಟೋ ಚಾಲಕರು, ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.