ಮಡಿಕೇರಿ, ಜು. ೧೬: ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚಾಲಕರಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಬಿಸಿ ಮುಟ್ಟಿಸಿದೆ. ದಿಢೀರ್ ಕಾರ್ಯಾಚರಣೆ ನಡೆಸಿದ ಆರ್ಟಿಓ ಆಧಿಕಾರಿಗಳು, ಅನೇಕ ಚಾಲಕರಿಗೆ ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ.
ನಗರ ವ್ಯಾಪ್ತಿಯಲ್ಲಿ ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ತುಂಬಿಸಿಕೊAಡು ವಾಹನಗಳು `ಶಾಲಾ ಟ್ರಿಪ್’ ಮಾಡುತ್ತಿವೆ ಎಂಬ ಆರೋಪಗಳಿದ್ದವು. ಜೊತೆಗೆ ಬಿಳಿಯ ನಂಬರ್ ಪ್ಲೇಟ್ ಹೊಂದಿದ ಸ್ವಂತ ವಾಹನಗಳಲ್ಲೂ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಹಳದಿ ಬೋರ್ಡ್ ಹೊಂದಿದ್ದರೂ, ಕೆಲವು ವಾಹನಗಳಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಸಾಗಿಸುವಾಗ ಒಂದು ವೇಳೆ ಅವಘಡಗಳಾದರೆ ವಿಮಾ ಸೌಲಭ್ಯ ಸಿಗುವುದಿಲ್ಲ. ಇಂತಹ ದೂರುಗಳ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ದಿಢೀರ್ ಕಾರ್ಯಾಚರಣೆ ನಡೆಸಿತು. ಆರ್ಟಿಓ ಸತೀಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಇನ್ಸ್ಪೆಕ್ಟರ್ ಮೋಹನ್ ಕುಮಾರ್ ವಹಿಸಿದ್ದರು.
ಪರಿಶೀಲನೆ ವೇಳೆ, ಈಕೋ, ಮಾರುತಿ ಓಮ್ನಿ ಇತ್ಯಾದಿ ವಾಹನಗಳಲ್ಲಿ ೧೮ರಿಂದ ೨೦ ಮಕ್ಕಳನ್ನು ಕರೆದೊಯ್ಯುತ್ತಿದ್ದುದು ಪತ್ತೆಯಾಗಿದೆ. ವೈಟ್ ಬೋರ್ಡ್ ವಾಹನ ಮಾಲೀಕರೂ ಸಾರಿಗೆ ನಿಯಮ ಉಲ್ಲಂಘಿಸಿ ಮಿತಿ ಮಿರಿದ ಸಂಖ್ಯೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದುದನ್ನು ಪತ್ತೆ ಹಚ್ಚಲಾಗಿದೆ. ವಾಹನಗಳ ಇನ್ಸೂರೆನ್ಸ್ ಹಾಗೂ ತೆರಿಗೆ ಪಾವತಿ ಮಾಹಿತಿಯನ್ನೂ ಅಧಿಕಾರಿಗಳು ಪರಿಶೀಲಿಸಿದರು. ಈ ವೇಳೆ ಕಾನೂನು ಮೀರಿದ ವಾಹನ ಚಾಲಕರಿಗೆ ಭಾರೀ ದಂಡ ವಿಧಿಸಲಾಯಿತು.