ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೧೬ : ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಬುಧವಾರದಿಂದ ಅನುಷ್ಠಾನಕ್ಕೆ ಬಂದಿದೆ. ಇದರಿಂದ ರಾಜ್ಯದ ಜೈವಿಕ ತಂತ್ರಜ್ಞಾನ, ಫಾರ್ಮಸುಟಿಕಲ್ಸ್, ಜವಳಿ ಮತ್ತು ಗಾರ್ಮೆಂಟ್ಸ್, ಸಮುದ್ರ ಉತ್ಪನ್ನಗಳು, ಇಂಜಿನಿಯರಿAಗ್ ಉತ್ಪನ್ನಗಳು ಮತ್ತು ಮಷಿನರಿ, ಚಿಕ್ಕಮಗಳೂರು ಮತ್ತು ಕೊಡಗಿನ ಉತ್ಕೃಷ್ಟ ಕಾಫಿ ಹಾಗೂ ಸಾಂಬಾರ ಪದಾರ್ಥಗಳ ವಲಯಕ್ಕೆ ಭಾರಿ ಲಾಭವಾಗಲಿದೆ. ಉದ್ಯಮಿಗಳು ಈ ಸದವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹೆಗಲು ಕೊಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದ್ದಾರೆ.

ಭಾರತ-ಯು.ಕೆ. ನಡುವಿನ ಈ ಚಾರಿತ್ರಿಕ ಒಪ್ಪಂದವು ಕಳೆದ ವರ್ಷದ ಜುಲೈ ೨೫ರಂದು ಕೊನೆಗೊಂಡಿತ್ತು. ಒಪ್ಪಂದ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಉದ್ದಿಮೆದಾರರಿಗೆ ಬುಧವಾರ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಅವರು ಮಾತನಾಡಿದರು.

ಈ ಒಪ್ಪಂದದಿAದಾಗಿ ಭಾರತದ ಶೇ.೯೯ರಷ್ಟು ಉತ್ಪನ್ನಗಳು ಸುಂಕರಹಿತವಾಗಿ ಯುಕೆ ಮಾರುಕಟ್ಟೆ ಪ್ರವೇಶಿಸಲಿವೆ, ರಾಜ್ಯವು ಮುಂಚೂಣಿಯಲ್ಲಿರುವ ಎಲ್ಲಾ ವಲಯಗಳೂ ಈ ಒಪ್ಪಂದದ ವ್ಯಾಪ್ತಿಯಲ್ಲಿವೆ. ಆದ್ದರಿಂದ ನಾವು ಯುನೈಟೆಡ್ ಕಿಂಗ್ಡಮ್‌ನ ವಿಶ್ವವಿದ್ಯಾಲಯಗಳು ಮತ್ತು ನಮ್ಮಲ್ಲಿನ ಉದ್ಯಮಗಳ ನಡುವೆ ಹೆಚ್ಚೆಚ್ಚು ಸಹಭಾಗಿತ್ವಕ್ಕೆ ಮುಂದಾಗಲಿದ್ದೇವೆ. ಇದರಿಂದ ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಜಂಟಿ ನಾವೀನ್ಯತೆಗೆ ಪ್ರೋತ್ಸಾಹ ಸಿಗಲಿದೆ. ಅಲ್ಲಿಂದ ನಮ್ಮಲ್ಲಿಗೆ ಬರುವ ಶೇ.೯೦ರಷ್ಟು ಉತ್ಪನ್ನಗಳಿಗೂ ಯಾವುದೇ ಸುಂಕ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಒಪ್ಪಂದದ ವ್ಯಾಪ್ತಿಯಲ್ಲಿ ಬರುವ ಮೋಡ್-೧ ಸೇವೆಯಿಂದ ಬೆಂಗಳೂರು ಕೇಂದ್ರಿತ ಐಟಿ ಉದ್ಯಮಕ್ಕೆ ಭಾರಿ ಲಾಭ ಸಿಗಲಿದೆ. ಮುಂದಿನ ದಿನಗಳಲ್ಲಿ ಬ್ರಿಟನ್‌ನ ಹಲವು ಕಂಪನಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ತಮ್ಮ ಜಿಸಿಸಿ ಕೇಂದ್ರಗಳನ್ನು ಸ್ಥಾಪಿಸಲಿವೆ. ಏರೋಸ್ಪೇಸ್ ವಲಯದಲ್ಲಿ ಬೆಂಗಳೂರು ನಗರದ ಜೊತೆಗೆ ಬೆಳಗಾವಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದದಿAದ ನಮ್ಮ ಏರೋಸ್ಪೇಸ್ ಉತ್ಪನ್ನಗಳ ಮೇಲಿನ ಸುಂಕ ಶೇ.೧೧ರಿಂದ ಸೊನ್ನೆಗೆ, ಆಟೋಮೋಟಿವ್ ಮೇಲಿನ ಸುಂಕವು ಶೇ.೧೧೦ರಿಂದ ಸೊನ್ನೆಗೆ, ಎಲೆಕ್ಟಿçಕಲ್ ಮಷಿನರಿ ಮೇಲಿನ ಸುಂಕ ಶೇ.೨೨ರಿಂದ ಸೊನ್ನೆಗೆ ಮತ್ತು ವೈದ್ಯಕೀಯ ಉಪಕರಣಗಳ ಮೇಲಿನ ಸುಂಕ ಶೇ.೧೩.೭೫ರಿಂದ ಸೊನ್ನೆಗೆ ಇಳಿಯಲಿದೆ. ಇನ್ನೂ ಕೆಲವು ಉತ್ಪನ್ನಗಳ ಮೇಲಿನ ಸುಂಕ ೫-೬ ವರ್ಷಗಳಲ್ಲಿ ಶೂನ್ಯಕ್ಕೆ ಇಳಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇದಲ್ಲದೆ ಎಣ್ಣೆಬೀಜಗಳು, ಕಾಳುಮೆಣಸು, ಏಲಕ್ಕಿ, ಬ್ಯಾಡಗಿ ಮತ್ತು ದೇವನೂರು ಮೆಣಸಿನಕಾಯಿ ಮುಂತಾದ ಸಾಂಬಾರ ಪದಾರ್ಥಗಳು, ಸಿರಿಧಾನ್ಯಗಳು, ಹೂವು, ಹಣ್ಣು, ತರಕಾರಿ, ಮೀನು, ತೆಂಗು, ಮಾವು, ನಿಂಬೆ, ಮಲ್ಲಿಗೆ, ಚೆಂಡುಹೂವು, ಕೊಡಗು ಮತ್ತು ಚಿಕ್ಕಮಗಳೂರಿನ ಉತ್ಕೃಷ್ಟ ಕಾಫಿ, ಹಾಸನ, ಬೀದರ್ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ತಯಾರಾಗುವ ಸಂಸ್ಕರಿತ ಕೃಷಿ ಮತ್ತು ಆಹಾರ ಉತ್ಪನ್ನಗಳ ರಫ್ತಿಗೆ ಇನ್ಮುಂದೆ ಯುಕೆ ಮಾರುಕಟ್ಟೆಯಲ್ಲಿ ಸುಂಕದ ಹೊರೆ ಇರುವುದಿಲ್ಲ ಎಂದು ಅವರು ನುಡಿದಿದ್ದಾರೆ.

ಸಣ್ಣ ಕೈಗಾರಿಕೆಗಳಿಗೂ ಈ ಒಪ್ಪಂದದಿAದ ಲಾಭವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಕಾಫಿ ಬೆಳೆಗಾರರು, ಗಾರ್ಮೆಂಟ್ಸ್ ಮಾಲೀಕರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಫ್ತುದಾರರಿಗೆ ಹೆಚ್ಚಿನ ತಿಳುವಳಿಕೆ ಮೂಡಿಸಲು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಜ್ಯವು ಏರೋಸ್ಪೇಸ್, ರಕ್ಷಣೆ, ಆಧುನಿಕ ತಯಾರಿಕ, ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರ, ಶುದ್ಧ ಇಂಧನ, ಸೆಮಿಕಂಡಕ್ಟರ್, ಡೀಪ್-ಟೆಕ್ ಮತ್ತು ಜಿಸಿಸಿ ಕ್ಷೇತ್ರಗಳಲ್ಲೂ ಯುಕೆ ಜೊತೆ ಸಹಭಾಗಿತ್ವದ ಉಪಕ್ರಮಗಳನ್ನು ತೆಗೆದುಕೊಳ್ಳಲಿದೆ. ಯುಕೆ ಹೂಡಿಕೆದಾರರನ್ನು ಸೆಳೆಯಲು ಅಲ್ಲಿಗೆ ಹೋಗಿ ರೋಡ್ ಶೋಗಳನ್ನು ನಡೆಸಲಾಗುವುದು ಎಂದು ಸಚಿವ ಎಂ ಬಿ ಪಾಟೀಲ್ ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ಯುಕೆ ಮೂಲದ ರೋಲ್ಸ್ ರಾಯ್ಸ್, ಬಿಎಇ ಸಿಸ್ಟಮ್ಸ್, ಟೆಸ್ಕೊ, ಎ ಆರ್ ಎಂ, ಹೆಚ್‌ಎಸ್ಬಿಸಿ ಮುಂತಾದ ಕಂಪನಿಗಳು ನೆಲೆಯೂರಿವೆ. ಇವುಗಳಲ್ಲಿ ೩೦ ಸಾವಿರಕ್ಕೂ ಹೆಚ್ಚು ಜನ ಉದ್ಯೋಗಿಗಳಿದ್ದಾರೆ. ಟೆಸ್ಕೊ ಕಂಪನಿಯು ತನ್ನ ಹೊಸ ವಿಸ್ತರಣಾ ಕೇಂದ್ರವನ್ನು ತೆರೆಯುತ್ತಿದ್ದು, ಅಲ್ಲಿ ೧೫ ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ರೋಲ್ಸ್ ರಾಯ್ಸ್ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿದೆ. ಈಗಿನ ಮುಕ್ತ ವ್ಯಾಪಾರ ಒಪ್ಪಂದವು ಇವುಗಳಿಗೆ ವೇಗವರ್ಧಕವಾಗಿ ಕೆಲಸ ಮಾಡಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, ಯುಕೆ ಲಿವರ್‌ಪೂಲ್, ಲ್ಯಾಂಕಾ ಸ್ಟೈರ್, ಬರ್ಕ್ ಬೆಕ್, ಇಂಪೀರಿಯಲ್ ಕಾಲೇಜು ವಿ.ವಿ.ಗಳು ರಾಜ್ಯದಲ್ಲಿ ತಮ್ಮ ಕ್ಯಾಂಪಸ್ ಆರಂಭಿಸಲಿವೆ. ಜೊತೆಗೆ ಕಿಂಗ್ಸ್ ಕ್ಯಾಂಟರಬರಿ ಮತ್ತು ಆರ್.ಜಿ.ಎಸ್ ಗಿಲ್ಡ್ ಫೋರ್ಡ್ ಶಾಲೆಗಳು ಕೂಡ ಇಲ್ಲಿ ಆರಂಭವಾಗಲಿವೆ ಎಂದು ಹೇಳಿದ್ದಾರೆ.

ಬೆಂಗಳೂರು ಮತ್ತು ಲಂಡನ್ ನಡುವೆ ಈಗ ವಾರದಲ್ಲಿ ೩೪ ನೇರ ವಿಮಾನಗಳ ಸೇವೆಯಿದೆ. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ನುಡಿದರು. ಈ ಒಡಂಬಡಿಕೆಯಿAದ ಭಾರತ ಮತ್ತು ಯು.ಕೆ. ನಡುವಿನ ವ್ಯಾಪಾರ ವಹಿವಾಟು ಪ್ರತೀ ವರ್ಷವೂ ೨೫ ಬಿಲಿಯನ್ ಪೌಂಡ್ ಹೆಚ್ಚಳವಾಗಲಿದ್ದು, ೨೦೩೦ರ ಹೊತ್ತಿಗೆ ೧೦೦ ಬಿಲಿಯನ್ ಪೌಂಡ್ ಮಟ್ಟಕ್ಕೆ ಬೆಳೆಯಲಿದೆ ಎಂದು ಅಯ್ಯರ್ ತಿಳಿಸಿದ್ದಾರೆ.

ಈ ಸಂದರ್ಭ ವಿದೇಶಾಂಗ ವಾಣಿಜ್ಯ ವ್ಯವಹಾರಗಳ ಜಂಟಿ ಮಹಾನಿರ್ದೇಶಕಿ ಡೋನಾ ಘೋಷ್ ಮತ್ತು ಕಸ್ಟಮ್ಸ್ ಇಲಾಖೆಯ ಆಯುಕ್ತೆ ಸುಚೇತಾ ಶ್ರೀಜೇಶ್ ಉಪಸ್ಥಿತರಿದ್ದರು.