ಸಿದ್ದಾಪುರ, ಜು. ೧೬: ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಹಳಗದ್ದೆ ಭಾನುಪ್ರಕಾಶ್ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಟಿ.ಎ. ಪ್ರಸನ್ನ ಅವರು ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರದಂದು ನಡೆದ ಚುನಾವಣೆಯಲ್ಲಿ ಹಳಗದ್ದೆ ಭಾನುಪ್ರಕಾಶ್ ಅವಿರೋಧವಾಗಿ ಆಯ್ಕೆಯಾದರು. ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ.ಕೆ. ಲೋಕೇಶ್, ಸಹಕಾರ ಸಂಘವು ಈಗಾಗಲೇ ಪ್ರಗತಿಯ ಪತದತ್ತ ದಾಪುಗಾಲು ಇಡುತ್ತಿದೆ. ರೈತರಿಗೆ ಹಾಗೂ ಸಂಘದ ಸದಸ್ಯರಿಗೆ ವಿವಿಧ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸಂಘವು ಮುಂದಿನ ದಿನಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆ ನಡೆಸಿದೆ ಎಂದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಭಾನುಪ್ರಕಾಶ್ ಮಾತನಾಡಿ, ಉಪಾಧ್ಯಕ್ಷ ಸ್ಥಾನದಲ್ಲಿ ಪ್ರಾಮಾಣಿಕನಾಗಿ ಸೇವೆ ಸಲ್ಲಿಸುತ್ತೇನೆ ಎಂದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಸಂಘದ ಉಪ ನಿಬಂಧ ಕಚೇರಿಯ ಅಧಿಕಾರಿ ಪ್ರದೀಪ್ ಕುಮಾರ್ ಪಿ.ಎಸ್. ಕಾರ್ಯನಿರ್ವಹಿಸಿದರು. ಈ ಸಂದರ್ಭ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಿಚಂಡ ಕಾರ್ಯಪ್ಪ ಹಾಗೂ ನಿರ್ದೇಶಕರು ಮತ್ತು ಸಹಕಾರ ಸಂಘದ ಸಿಬ್ಬಂದಿ ಹಾಜರಿದ್ದರು.