ತುಮಕೂರು, ಜು. ೧೬: ಕರ್ನಾಟಕ ರಾಜ್ಯ ಫುಟ್‌ಬಾಲ್ ಅಸೋಸಿಯೇಷನ್ ವತಿಯಿಂದ ತುಮಕೂರಿನಲ್ಲಿ ಆಯೋಜಿಸಲಾದ ಅಂತರ ಜಿಲ್ಲಾ ಫುಟ್‌ಬಾಲ್ ಟೂರ್ನಮೆಂಟ್-೨೦೨೬ ರಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ಭಾಜನವಾಗಿದೆ. ಫೈನಲ್ ಪಂದ್ಯದಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ಬೆಂಗಳೂರು ಜಿಲ್ಲಾ ತಂಡದ ವಿರುದ್ಧ ಸೆಣಸಾಟ ನಡೆಸಿತು. ನಿಗದಿತ ಅವಧಿಯ ಅಂತ್ಯಕ್ಕೆ ಎರಡೂ ತಂಡಗಳು ತಲಾ ಒಂದು ಗೋಲು ಬಾರಿಸಿ ೧-೧ ಸಮಬಲ ಸಾಧಿಸಿದವು. ನಂತರ ಪಂದ್ಯವನ್ನು ನಿರ್ಧರಿಸಲು ನಡೆದ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಬೆಂಗಳೂರು ತಂಡ ೫-೩ ಅಂತರ ದಲ್ಲಿ ಗೆಲುವು ಸಾಧಿಸಿ ಚಾಂಪಿ ಯನ್ ಪಟ್ಟ ಮುಡಿಗೇರಿಸಿಕೊಂಡರೆ, ಕೊಡಗು ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಮುಖ್ಯ ಕೋಚ್ ಆಗಿ ಜಗದೀಶ್ ಪಾಣತ್ತಲೆ, ಸಹಾಯಕ ಕೋಚ್ ಆಗಿ ದೀಪು ಮಾಚಯ್ಯ, ಮ್ಯಾನೇಜರ್ ಆಗಿ ದರ್ಶನ್ ಸುಕುಮಾರ್ ಕಾರ್ಯ ನಿರ್ವಹಿಸಿದರು. ಕೊಡಗಿನ ಮಣಿಕಂಠ ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು, ತನ್‌ವೀರ್ ಚಿನ್ನು ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಪಡೆದರು. - ಅಶೋಕ್