ಗೋಣಿಕೊಪ್ಪ ವರದಿ, ಜು. ೧೬; ಪೊನ್ನಂಪೇಟೆಯ ಕಾನೂರು ರಸ್ತೆಗೆ ಸ್ವಾತಂತ್ರö್ಯ ಹೋರಾಟಗಾರ ಕೊದೇಂಗಡ ಜಿ. ಕಾರ್ಯಪ್ಪ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಪಿ. ಸೋಮಣ್ಣ ತಿಳಿಸಿದರು.

ತಾ. ೧೮ ರಂದು ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಎ. ಎಸ್. ಪೊನ್ನಣ್ಣ ನಾಮ ಫಲಕವನ್ನು ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.

೧೬ನೇ ವಯಸ್ಸಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡು ಮೂರು ಬಾರಿ ಜೈಲುವಾಸ ಅನುಭವಿಸಿದ್ದ ಕಿರುಗೂರು ಗ್ರಾಮದ ಕೊದೇಂಗಡ ಜಿ. ಕಾರ್ಯಪ್ಪ ಹೆಸರನ್ನು ಪೊನ್ನಂಪೇಟೆಯ ಕಾನೂರು ರಸ್ತೆಗೆ ನಾಮಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಲಚೇರಿ, ಬೆಳಗಾಂ ಮತ್ತು ತಿರುಚನಾಪಳ್ಳಿಯಲ್ಲಿ ಸೆರೆವಾಸ ಅನುಭವಿಸಿದ ಕಾರ್ಯಪ್ಪ ಅವರ ಹೆಸರು ಅಜರಾಮರವಾಗಿ ಉಳಿಯಬೇಕು ಎಂಬ ಚಿಂತನೆ ವ್ಯಕ್ತವಾಗಿದೆ. ಹೋರಾಟಗಾರರಾಗಿ ಹಿರಿಯರಾಗಿದ್ದ ಕೊಳ್ಳಿಮಾಡ ಸಿ. ಕರುಂಬಯ್ಯ ಅವರೊಂದಿಗೆ ಕಾರ್ಯಪ್ಪ ಕಿರಿಯರಾಗಿ ಕೂಡ ಹೋರಾಟದಲ್ಲಿ ಭಾಗಿಯಾಗಿದ್ದರು. ಕಿರಿಯ ವಯಸ್ಸಿನಲ್ಲಿ ಹೋರಾಟದ ಕಿಚ್ಚು ಹರಿಸಿದ್ದ ಕಾರ್ಯಪ್ಪ ಅವರನ್ನು ನೆನಪಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ ಎಂದು ತಿಳಿಸಿದರು.

ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಸ್ವಾತಂತ್ರö್ಯ ಹೋರಾಟಗಾರರು ಸ್ವಾತಂತ್ರö್ಯಕ್ಕಾಗಿ ಹೋರಾಡಿರುವ ಬಗ್ಗೆ ಹಿನ್ನೆಲೆ ಇದ್ದು, ಹೆಸರು ಮತ್ತು ಹುತಾತ್ಮ ಯೋಧರ ಹೆಸರುಗಳನ್ನು ಆಯಾ ಗ್ರಾಮಗಳ ರಸ್ತೆಗೆ ನಾಮಕರಣ ಮಾಡಲು ವೇದಿಕೆ ಯೋಜನೆ ರೂಪಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಗೋಣಿಕೊಪ್ಪ ಬಸ್ ನಿಲ್ದಾಣಕ್ಕೆ ಸ್ವಾತಂತ್ರö್ಯ ಹೋರಾಟಗಾರ ಕೊಳ್ಳಿಮಾಡ ಸಿ. ಕರುಂಬಯ್ಯ ಹೆಸರು ನಾಮಕರಣ ಮಾಡಿರುವ ರೀತಿಯಲ್ಲಿ ಪೊನ್ನಂಪೇಟೆ ಬಸ್ ನಿಲ್ದಾಣಕ್ಕೆ ಕೂಡ ಸ್ವಾತಂತ್ರö್ಯ ಹೋರಾಟಗಾರರ ಹೆಸರು ನಾಮಕರಣ ಮಾಡಬೇಕು ಎಂಬ ಒತ್ತಾಯ ಕೂಡ ಇದೆ ಎಂದು ತಿಳಿಸಿದರು.

ವೇದಿಕೆ ಕಾರ್ಯದರ್ಶಿ ಚೇಂದಿರ ಬೋಪಣ್ಣ, ಖಜಾಂಚಿ ಐನಂಡ ಮಂದಣ್ಣ, ಜಂಟಿ ಕಾರ್ಯದರ್ಶಿ ನೆರೆಯಂಡಮ್ಮನ ಸುಬ್ರಮಣಿ, ನಿರ್ದೇಶಕರುಗಳಾದ ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಮಲ್ಲಂಡ ರಾಜ ಸುಬ್ಬಯ್ಯ, ಕೊದೇಂಗಡ ವಿಠಲ, ಮೇಚಮಾಡ ಪೊನ್ನಪ್ಪ ಹಾಗೂ ಹೋರಾಟಗಾರ ಕಾರ್ಯಪ್ಪ ಅವರ ಪುತ್ರ ಕೊದೇಂಗಡ ರವಿ ಇದ್ದರು.