ಗೋಣಿಕೊಪ್ಪಲು, ಜು. ೧೬: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮನೆಯೊಂದರ ಸಮೀಪ ನಿರ್ಮಿಸಲಾಗಿರುವ ೨೦ ಅಡಿ ಎತ್ತರದ ತಡೆಗೋಡೆ ಬೀಳುವ ಸ್ಥಿತಿಯಲ್ಲಿದ್ದು ಸ್ಥಳಕ್ಕೆ ವೀರಾಜಪೇಟೆ ಪುರಸಭಾ ಮುಖ್ಯಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಪಿ.ಜಿ. ಜೀವನ್ ಬೆಳ್ಳಿಯಪ್ಪ ಎಂಬವರ ಮನೆಯ ಮೇಲ್ಭಾಗದ ಮನೆಯವರು ತಮ್ಮ ನಿವೇಶನಕ್ಕೆ ಮಣ್ಣನ್ನು ಸುರಿದು ಜೆಸಿಬಿ ಮೂಲಕ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮಳೆ ರಭಸಕ್ಕೆ ಹಾಗೂ ಜೆಸಿಬಿಯ ಕೆಲಸದಿಂದಾಗಿ ಪಿ.ಜಿ. ಜೀವನ್ ಅವರ ಬೃಹತ್ ತಡೆಗೋಡೆಗೆ ತೀವ್ರ ಹಾನಿಯಾಗಿ ಬಿರುಕುಬಿಟ್ಟಿದೆ. ಇದರಿಂದಾಗಿ ಮುಂದೆ ತಡೆಗೋಡೆ ಬೀಳುವ ಸ್ಥಿತಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಅಲ್ಲದೆ ಕದನೂರು ಗ್ರಾಮದ ರೈತ ಸಂಘದ ಅಧ್ಯಕ್ಷರಾಗಿರುವ ಪಿ.ಜಿ. ಜೀವನ್ ಬೆಳ್ಳಿಯಪ್ಪ ಕೊಡಗು ಜಿಲ್ಲಾ ರೈತ ಸಂಘಕ್ಕೂ ಈ ಬಗ್ಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೀರಾಜಪೇಟೆ ಪುರಸಭೆಯ ಮುಖ್ಯ ಅಧಿಕಾರಿ ಅವರನ್ನು ಸ್ಥಳಕ್ಕೆ ಬರಮಾಡಿಕೊಂಡ ರೈತ ಮುಖಂಡರು, ರೈತರಿಗಾಗಿರುವ ಸಮಸ್ಯೆಗೆ ಕೂಡಲೇ ಪರಿಹಾರ ಕಲ್ಪಿಸಲು ಮನವಿ ಮಾಡಿದರು. ತಡೆಗೋಡೆ ಅಪಾಯದಲ್ಲಿರುವುದರಿಂದ ಮನೆಗೆ ಹಾಗೂ ಮನೆಯಲ್ಲಿರುವವರಿಗೂ ತೊಂದರೆ ಆಗುವ ಸಂಭವವಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ವೀರಾಜಪೇಟೆ ಪುರಸಭಾ ಮುಖ್ಯ ಅಧಿಕಾರಿ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷÀ ಅಮ್ಮಣಿಚಂಡ ರವಿ ಉತ್ತಪ್ಪ, ರೈತ ಸಂಘದ ಗೌರವ ಕಾರ್ಯದರ್ಶಿ ಪೆಮ್ಮಂಡ ಅಪ್ಪಣ್ಣ, ಪೆಮ್ಮಂಡ ಪ್ರಸಾದ್, ವಿಜು ಕುಶಾಲಪ್ಪ, ಅಮ್ಮಣಿಚಂಡ ರಾಜ ನಂಜಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಇದ್ದರು.