ಮಡಿಕೇರಿ, ಜು. ೧೬: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಮಾರ್ಗ ಬದಲಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ೪ ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ಹೆಸರಾಂತ ಪ್ರವಾಸಿ ತಾಣ ರಾಜಾಸೀಟ್ ತಾ. ೧೩ರಿಂದ ಮತ್ತೆ ಪ್ರವಾಸಿಗರಿಗಾಗಿ ತೆರೆಯಲ್ಪಟ್ಟಿದೆ.
ವ್ಯಾಪಕ ಮಳೆಯಿಂದಾಗಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಬದಿ ಭೂಕುಸಿತ ಉಂಟಾಗಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಈಗಲೂ ಅದು ಮುಂದುವರೆದಿದೆ. ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಡೆಯಿಂದ ಹೊರಹೋಗುವ ಎಲ್ಲಾ ವಾಹನಗಳು ರಾಜಾಸೀಟ್ ರಸ್ತೆಯನ್ನು ಬಳಸಿ ಸಂಚರಿಸುತ್ತಿವೆ. ಆದ್ದರಿಂದ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಮತ್ತು ರಾಜಾಸೀಟ್ ಬಳಿ ಸಾರ್ವಜನಿಕರು ಹಾಗೂ ಪ್ರವಾಸಿಗರು ವಾಹನ ನಿಲುಗಡೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತದೆ. ಅಲ್ಲದೆ ರಾಜಾಸೀಟ್ ರಸ್ತೆಯಲ್ಲಿ ಶಾಲೆಯಿದ್ದು, ವಾಹನಗಳ ಅಧಿಕ ಸಂಚಾರ ಮತ್ತು ನಿಲುಗಡೆಯಿಂದ ಶಾಲಾ ಮಕ್ಕಳಿಗೂ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಡಚಣೆ ನಿವಾರಿಸಲು, ಸಾರ್ವಜನಿಕರ ಆಸ್ತಿಗಳ ರಕ್ಷಣೆ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಾಜಾಸೀಟ್ ಬಳಿ ವಾಹನ ನಿಲುಗಡೆ ಮತ್ತು ರಾಜಾಸೀಟ್ಗೆ ಸಾರ್ವಜನಿಕರ, ಪ್ರವಾಸಿಗರ ಪ್ರವೇಶವನ್ನು ತಾ. ೯ ರಿಂದ ೧೨ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ೪ ದಿನಗಳ ಬಳಿಕ ತಾ. ೧೩ರಿಂದ ರಾಜಾಸೀಟ್ ಅನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ೪ ದಿನಗಳ ಕಾಲ ರಾಜಾಸೀಟ್ ಮುಚ್ಚಲ್ಪಟ್ಟ ಕಾರಣ ಸುಮಾರು ೫ ಸಾವಿರ ಮಂದಿ ಪ್ರವಾಸಿಗರು ರಾಜಾಸೀಟ್ಗೆ ಭೇಟಿ ನೀಡುವ ಅವಕಾಶದಿಂದ ವಂಚಿತರಾಗಿರಬಹುದು ಎಂದು ತೋಟಗಾರಿಕಾ ಇಲಾಖೆ ಅಂದಾಜು ಮಾಡಿದ್ದು, ಇದರಿಂದ ಸುಮಾರು ಒಂದು ಲಕ್ಷದಷ್ಟು ಆದಾಯ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.