ಸಿದ್ದಾಪುರ, ಜು. ೧೮: ಎರಡು ಕಾಡಾನೆಗಳು ಮನೆಯಂಗಳಕ್ಕೆ ನುಗ್ಗಿ ಕಾಫಿ ತೋಟದಲ್ಲಿ ದಾಂಧಲೆ ನಡೆಸಿ ೬೦ಕ್ಕೂ ಹೆಚ್ಚು ಕಾಫಿ ಗಿಡಗಳು ಹಾಗೂ ಅಡಿಕೆ ಮರಗಳನ್ನು ನಾಶಪಡಿಸಿರುವ ಘಟನೆ ನಂಜರಾಯಪಟ್ಟಣ ಗ್ರಾಮದ ದಾಸವಾಳದಲ್ಲಿ ನಡೆದಿದೆ.
ದಾಸವಾಳ ಗ್ರಾಮದ ನಿವಾಸಿ ಚೀಯಂಡಿ ತೇಜಸ್ ಪಾಪಯ್ಯ ಅವರ ಮನೆ ಸಮೀಪದ ಕಾಫಿ ತೋಟಕ್ಕೆ ರಾತ್ರಿ ವೇಳೆ ನುಗ್ಗಿದ ಎರಡು ಕಾಡಾನೆಗಳು ಮನೆಯ ಸುತ್ತಲೂ ಸಂಚರಿಸಿ ಬಳಿಕ ತೋಟದಲ್ಲಿ ವ್ಯಾಪಕ ಹಾನಿ ಉಂಟುಮಾಡಿವೆ. ಕಾಡಾನೆಗಳು ಸುಮಾರು ೬೦ಕ್ಕೂ ಅಧಿಕ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿದ್ದು, ಹಲವು ಅಡಿಕೆ ಮರಗಳನ್ನು ಕಿತ್ತುಹಾಕಿ ಹಾನಿಗೊಳಿಸಿವೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತೇಜಸ್ ಪಾಪಯ್ಯ ತಿಳಿಸಿದ್ದಾರೆ.
ಕಾಡಾನೆಗಳಿಂದ ಉಂಟಾದ ಬೆಳೆ ಹಾನಿಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ತ್ವರಿತವಾಗಿ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.