ಮಡಿಕೇರಿ, ಜು. ೧೮: ಪೊನ್ನಂಪೇಟೆ ತಾಲೂಕಿನ ತೆರಾಲು, ಬಿರುನಾಣಿ, ಮರೆನಾಡು ಸೇರಿದಂತೆ ವಿವಿಧ ಪ್ರದೇಶಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ಭೇಟಿ ನೀಡಿ ಆದಿವಾಸಿ ಕಾರ್ಮಿಕರಲ್ಲಿ ಕಾರ್ಮಿಕರ ಹಕ್ಕುಗಳು, ಸರ್ಕಾರಿ ಯೋಜನೆಗಳು ಹಾಗೂ ಮಕ್ಕಳ ಶಿಕ್ಷಣದ ಕುರಿತು ಜಾಗೃತಿ ಮೂಡಿಸಿದರು.

ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ದನ್ ಪಿಂಚಣಿ ಯೋಜನೆ, ಇ-ಶ್ರಮ್ ಸ್ಮಾರ್ಟ್ ಕಾರ್ಡ್, ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಅಪಘಾತ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅರ್ಹ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಐದನೇ ಹಾಗೂ ಆರನೇ ತರಗತಿಯಿಂದ ವಿದ್ಯಾರ್ಥಿ ನಿಲಯ ಮತ್ತು ವಸತಿ ನಿಲಯಗಳ ಸೌಲಭ್ಯ ಲಭ್ಯವಿದ್ದು, ಅವುಗಳನ್ನು ಬಳಸಿಕೊಂಡು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆದಿವಾಸಿ ಸಮುದಾಯದವರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದAತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ರಾಷ್ಟçದ ಅಭಿವೃದ್ಧಿ ಎಂದರೆ ಪ್ರತಿಯೊಬ್ಬರಿಗೂ ಮೂಲಭೂತ ಸೌಲಭ್ಯಗಳು ತಲುಪುವುದು ಹಾಗೂ ಗೌರವಯುತ ಜೀವನ ನಡೆಸಲು ಅವಕಾಶ ದೊರೆಯುವುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿಯೇ ರಾಷ್ಟçದ ಪ್ರಗತಿಗೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ತೆರಾಲು ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಮಿಕ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸಿದ ಅವರು, ಮರೆನಾಡು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಕ್ಷಣದ ಮೂಲಕವೇ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುವುದರಿಂದ ಶಾಲೆ ಬಿಟ್ಟಿರುವ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವಂತೆ ಮನವಿ ಮಾಡಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಎಂ.ಎನ್. ಯತ್ನಟ್ಟಿ ಮಾತನಾಡಿ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯವಿಲ್ಲದ ಅಸಂಘಟಿತ ಕಾರ್ಮಿಕರಿಗೆ ವಿವಿಧ ಪರಿಹಾರ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ಲಭ್ಯವಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಯೋಜನೆಯಡಿ ೧೩,೬೩೬ ಮಂದಿಗೆ, ಇ-ಶ್ರಮ್ ಯೋಜನೆಯಡಿ ೬೯,೭೯೮ ಮಂದಿಗೆ, ದಿನಪತ್ರಿಕೆ ವಿತರಕರ ಅಪಘಾತ ಪರಿಹಾರ ಯೋಜನೆಯಡಿ ೪೮ ಮಂದಿಗೆ, ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ ೫೬ ಮಂದಿಗೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ದನ್ ಯೋಜನೆಯಡಿ ೧,೪೮೩ ಮಂದಿಗೆ, ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ ೪,೫೧೪ ಮಂದಿಗೆ ಹಾಗೂ ಖಾಸಗಿ ವಾಣಿಜ್ಯ ಚಾಲಕರ ಅಪಘಾತ ವಿಮಾ ಯೋಜನೆಯಡಿ ೧,೧೦೮ ಮಂದಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ ಎಂದು ತಿಳಿಸಿದರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಮಕ್ಕಳಿಗೆ ದೊರೆಯುವ ಸರ್ಕಾರಿ ಸೌಲಭ್ಯಗಳು ಹಾಗೂ ಕಾರ್ಮಿಕರ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, ಕಾರ್ಮಿಕರ ಸ್ಮಾರ್ಟ್ ಕಾರ್ಡ್ ನೋಂದಣಿ ಮತ್ತು ವಿತರಣೆಯು ಆನ್‌ಲೈನ್ ಮೂಲಕ ನಿರಂತರವಾಗಿ ನಡೆಯುತ್ತಿದ್ದು, ಅರ್ಹರು ಇದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಸಿ. ಮಾದಪ್ಪ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಆರ್. ಸಿರಾಝ್ ಅಹಮದ್, ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಜೆ.ಆರ್. ತುಳಸಿ, ಪೊಲೀಸ್ ಇನ್ಸ್ಪೆಕ್ಟರ್ ಸುಮತಿ, ಬಿ.ಎಸ್. ಶಿವರುದ್ರ, ರಾಜೇಶ್, ಕೌಶಲ್ಯ, ಶಿಕ್ಷಕರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.