ಚೆಯ್ಯಂಡಾಣೆ, ಜು. ೧೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮತ್ತೆ ತೀವ್ರಗೊಂಡಿದ್ದು, ರೈತರ ಕೃಷಿ ಉಪಕರಣಗಳು ಹಾಗೂ ತೋಟಗಳಿಗೆ ವ್ಯಾಪಕ ಹಾನಿ ಉಂಟುಮಾಡಿದೆ.
ನರಿಯAದಡ ಗ್ರಾಮದ ಪೊಕ್ಕುಳಂಡ್ರ ಪೂಣಚ್ಚ ಅವರ ಕೆರೆಗೆ ಅಳವಡಿಸಿದ್ದ ಮೋಟಾರ್ ಪಂಪ್ಸೆಟ್ ಅನ್ನು ಕಾಡಾನೆ ತುಳಿದು ಕೆರೆಯೊಳಗೆ ತಳ್ಳಿಹಾಕಿದೆ. ಅಲ್ಲದೆ, ಗದ್ದೆಯಲ್ಲಿ ನಿಲ್ಲಿಸಲಾಗಿದ್ದ ಟಿಲ್ಲರ್ಗೂ ತುಳಿದು ಹಾನಿಪಡಿಸಿದೆ. ಇದೇ ವೇಳೆ ಇತರ ರೈತರ ಕಾಫಿ, ಅಡಿಕೆ, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ತುಳಿದು ನಾಶಪಡಿಸಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ನಿರAತರ ಕಾಡಾನೆ ಹಾವಳಿಯಿಂದ ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ರೈತರು ಜೀವಭಯದಲ್ಲೇ ಕೃಷಿ ಚಟುವಟಿಕೆ ನಡೆಸುವಂತಾಗಿದೆ. ಈ ಹಿಂದೆ ಕೂಡ ಇದೇ ವ್ಯಾಪ್ತಿಯಲ್ಲಿ ಕಾಡಾನೆಗಳು ರೈತರು ಹಾಗೂ ಕಾರ್ಮಿಕರ ಮೇಲೆ ಹಲವು ಬಾರಿ ದಾಳಿ ನಡೆಸಿರುವ ಘಟನೆಗಳು ನಡೆದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಜೀವಹಾನಿ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಂಡು ಕಾಡಾನೆಗಳು ತೋಟಗಳಿಗೆ ನುಸುಳದಂತೆ ತಡೆಗಟ್ಟಬೇಕು. ಸಮಸ್ಯೆ ಸೃಷ್ಟಿಸುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಜೊತೆಗೆ ಬೆಳೆ ಹಾಗೂ ಆಸ್ತಿಪಾಸ್ತಿಗೆ ಉಂಟಾದ ನಷ್ಟಕ್ಕೆ ತ್ವರಿತವಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.