ವೀರಾಜಪೇಟೆ, ಜು. ೧೯: ವೀರಾಜಪೇಟೆ ಲಯನ್ಸ್ ಕ್ಲಬ್‌ನ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಮ್ಮಣಿಚಂಡ ರತ್ನ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಕಾರ್ಯದರ್ಶಿಯಾಗಿ ವಕೀಲ ಸತೀಶ್ ಪೂಜಾರಿ, ಖಜಾಂಚಿಯಾಗಿ ಪ್ರಸನ್ನ ಆಯ್ಕೆಯಾಗಿದ್ದಾರೆ. ಮಡಿಕೇರಿ ವಕೀಲರಾದ ನಿರಂಜನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರುಗಳು ಹಾಗೂ ವಿವಿಧ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಅಮ್ಮಣಿಚಂಡ ರತ್ನ ಸುಬ್ರಮಣಿ ಮಾತನಾಡಿ, ವೀರಾಜಪೇಟೆ ಲಯನ್ಸ್ ಕ್ಲಬ್ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿದೆ. ಸಂಸ್ಥೆ ೫೦ ವರ್ಷ ಪೂರೈಸಿದ್ದು, ಎಲ್ಲಾ ಹಿರಿಯ ಹಾಗೂ ಕಿರಿಯ ಸದಸ್ಯರ ಸಹಕಾರದೊಂದಿಗೆ ಶೀಘ್ರದಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗುವುದು. ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.