ಕುಶಾಲನಗರ, ಜು. ೧೯: ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಸೇತುವೆ ಬಳಿ ಕುಶಾಲನಗರ ಪುರಸಭೆ ವತಿಯಿಂದ ಹೈ ಮಾಸ್ಟ್ ವಿದ್ಯುತ್ ದೀಪಗಳ ಗೋಪುರಕ್ಕೆ ಚಾಲನೆ ನೀಡಲಾಯಿತು. ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಅವರು ಚಾಲನೆ ನೀಡಿದರು.

ಅರಣ್ಯ ತಪಾಸಣಾ ಗೇಟ್ ಬಳಿ ನಿರ್ಮಾಣಗೊಂಡಿದ್ದ ಹೈ ಮಾಸ್ಟ್ ಗೋಪುರದ ದೀಪಗಳು ಕೆಟ್ಟು ನಿಂತಿದ್ದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಮನವಿ ಮೇರೆಗೆ ಗೋಪುರವನ್ನು ಸ್ಥಳಾಂತರ ಗೊಳಿಸಿ ನಿರ್ವಹಣೆ ಮಾಡುವ ಮೂಲಕ ಜಿಲ್ಲೆಯ ಗಡಿಭಾಗದಲ್ಲಿ ಅರಣ್ಯ ತಪಾಸಣಾ ಕೇಂದ್ರದ ಸಿಬ್ಬಂದಿಗಳಿಗೆ ಹಾಗೂ ಕಾವೇರಿ ನದಿ ಹಳೆಯ ಸೇತುವೆ ಮೇಲೆ ನಿರ್ಮಾಣಗೊಂಡಿರುವ ಕಾವೇರಿ ರೋಟರಿ ಉದ್ಯಾನವನಕ್ಕೆ ರಾತ್ರಿ ವೇಳೆ ಹೆಚ್ಚಿನ ಬೆಳಕು ಕಲ್ಪಿಸುವಲ್ಲಿ ಸಹಕಾರಿಯಾಗಿದೆ ಎಂದು ಮುಖ್ಯ ಅಧಿಕಾರಿ ಗಿರೀಶ್ ತಿಳಿಸಿದರು.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ ಎನ್ ಚಂದ್ರಮೋಹನ್, ರೋಟರಿ ಸಂಸ್ಥೆ ಪ್ರಮುಖರಾದ ಉಲ್ಲಾಸ್, ಕೃಜ್ವೆಲ್ ಕೋಟ್ಸ್ ಅರಣ್ಯ ಇಲಾಖೆಯ ಸಾಯಬಾನ್ ತಳವಾರ್, ಗುತ್ತಿಗೆದಾರ ಚಂದ್ರು ಮತ್ತಿತರರು ಇದ್ದರು.