ಮುಳ್ಳೂರು, ಜು. ೨೧: ಸಮೀಪದ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್‌ನ ೨೦೨೬-೨೭ನೇ ಸಾಲಿನ ಪದಗ್ರಹಣ ಸಮಾರಂಭ ಆಲೂರು ಸಿದ್ದಾಪುರದ ವೈಭವ ಸಭಾಂಗಣದಲ್ಲಿ ನಡೆಯಿತು.

ಪದಗ್ರಹಣಾಧಿಕಾರಿಯಾಗಿ ಆಗಮಿ ಸಿದ್ದ ರತನ್ ತಮ್ಮಯ್ಯ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ರೋಟರಿ ಸಂಸ್ಥೆ ವಿಶ್ವದ ಅಗ್ರಗಣ್ಯ ಸಮಾಜಸೇವಾ ಸಂಸ್ಥೆಯಾಗಿದ್ದು, ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಗೌರವ ಗಳಿಸಿದೆ. ಆಲೂರು ಸಿದ್ದಾಪುರ ರೋಟರಿ ಸದಸ್ಯರು ಈ ಭಾಗದಲ್ಲಿ ಸಮಾಜಮುಖಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ ಜಿಲ್ಲಾ ಸಹಾಯಕ ರಾಜ್ಯಪಾಲ ರಂಗಸ್ವಾಮಿ ಮಾತನಾಡಿ, ಸಮಾಜಸೇವೆಯ ಜೊತೆಗೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲೂ ರೋಟರಿ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ರೋಟರಿ ಸದಸ್ಯರ ಸೇವಾ ಚಟುವಟಿಕೆಗಳಿಗೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ೨೦೨೬-೨೭ನೇ ಸಾಲಿನ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷರಾಗಿ ಸಂಪತ್ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜೋನಲ್ ಲೆಫ್ಟಿನೆಂಟ್ ವಸಂತ್ ಕುಮಾರ್, ನಿವೃತ್ತ ಅಧ್ಯಕ್ಷ ನಾರಾಯಣ ಸ್ವಾಮಿ, ನಿವೃತ್ತ ಕಾರ್ಯದರ್ಶಿ ಕಿರಣ್ ಸೇರಿದಂತೆ ರೋಟರಿ ಸಂಸ್ಥೆಯ ಸದಸ್ಯರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.