ಮಡಿಕೇರಿ, ಜು. ೨೧: ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಕೆಲವು ಬಾಡಿಗೆ ಜೀಪುಗಳು ಕೋಳಿಗೂಡು - ಕಾಲೂರು ಮಾರ್ಗದಲ್ಲಿ ಅತಿವೇಗವಾಗಿ ಸಂಚರಿಸುತ್ತಿರುವುದರಿAದ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ಕಾಲೂರು ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಮಡಿಕೇರಿಯಿಂದ ಕೋಳಿಗೂಡು-ಕಾಲೂರು ಮಾರ್ಗವಾಗಿ ಮಾಂದಲಪಟ್ಟಿಗೆ ತೆರಳುವ ಕೆಲವು ಬಾಡಿಗೆ ಜೀಪುಗಳು ಗ್ರಾಮದೊಳಗೆ ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದು, ಇದರಿಂದ ಶಾಲಾ ಮಕ್ಕಳು, ಪಾದಚಾರಿಗಳು ಹಾಗೂ ಸ್ಥಳೀಯರು ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದೊಳಗೆ ಹಾದುಹೋಗುವ ರಸ್ತೆ ಸಾರ್ವಜನಿಕ ಬಳಕೆಯದ್ದಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಮನೆಗಳಿವೆ. ಈ ನಡುವೆ ಅಬ್ಬಿಫಾಲ್ಸ್ ರಸ್ತೆ ತಾತ್ಕಾಲಿಕವಾಗಿ ಬಂದ್ ಆಗಿರುವ ಹಿನ್ನೆಲೆ ಇದೇ ಮಾರ್ಗದಲ್ಲಿ ವಾಹನಗಳ ಸಂಚಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಅಪಘಾತದ ಭೀತಿ ಎದುರಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜೀಪುಗಳಲ್ಲಿ ಅಳವಡಿಸಿರುವ ಹೆಚ್ಚುವರಿ ಫಾಗ್ ಲೈಟ್‌ಗಳು ಹಾಗೂ ನಿಯಮಬಾಹಿರ ಔಟರ್ ಲೈಟ್‌ಗಳನ್ನು ತೆರವುಗೊಳಿಸುವಂತೆಯೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಮನವಿಯಲ್ಲಿ ಕೋರಿದ್ದಾರೆ.

ಮನವಿಗೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು, ಅತಿವೇಗದ ಚಾಲನೆ ಮಾಡುವ ವಾಹನಗಳ ವೀಡಿಯೋ ಅಥವಾ ಇತರ ದೃಢ ಸಾಕ್ಷö್ಯಗಳನ್ನು ಪೊಲೀಸರಿಗೆ ನೀಡಿದರೆ ಸಂಬAಧಪಟ್ಟ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅಗತ್ಯವಿದ್ದಲ್ಲಿ ವಾಹನ ಜಪ್ತಿ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರ ಪರವಾಗಿ ಮಾತನಾಡಿದ ಕನ್ನಿಕಂಡ ಪೆಮ್ಮಯ್ಯ, ಎಲ್ಲಾ ಜೀಪು ಚಾಲಕರು ನಿಯಮ ಉಲ್ಲಂಘಿಸುತ್ತಿಲ್ಲ. ಆದರೆ ಕೆಲವು ಜೀಪುಗಳು ಅತಿವೇಗದಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳಿಗೆ ಅಪಾಯ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಎಸ್‌ಪಿ, ಜಿಲ್ಲಾಧಿಕಾರಿ ಹಾಗೂ ಆರ್‌ಟಿಓ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆೆ ಎಂದು ಹೇಳಿದರು.

ಮನವಿ ಸಲ್ಲಿಕೆ ಸಂದರ್ಭ ಕಾಲೂರು ಗ್ರಾಮದ ಕನ್ನಿಕಂಡ ಪೆಮ್ಮಯ್ಯ, ಕೊಂಬಾರನ ಮಿತುಲ್, ಕಾರ್ತಿಕ್, ಪವನ್, ದರ್ಶನ್, ಮೇದಪ್ಪ, ಭೀಮಯ್ಯ, ಉಮೇಶ್ ಹಾಗೂ ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.