ಕುಶಾಲನಗರ, ಜು. ೨೩: ಕಲೆಗಳು ಬದುಕಿನ ಅಂಗವಾಗಿದ್ದು ಗಾನ ಸಮರ್ಪಣೆಯ ಮೂಲಕ ಗಾನಕೋಗಿಲೆ ಜಾನಕಮ್ಮ ಅವರ ಸ್ಮರಣೆ ಮಾಡಿರುವುದು ಅತ್ಯಂತ ಮೌಲ್ಯಯುತ ಕಾರ್ಯಕ್ರಮವಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ. ಪಿ. ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರದ ಝೇಂಕಾರ್ ಮ್ಯೂಸಿಕಲ್ ಇವೆಂಟ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದೊಂದಿಗೆ ನಡೆದ ಜಾನಕಿ ಯಾನ ಮಧುರ ಗಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರುನಾಡಿನ ನೆಲ ಕಲೆ ಸಂಸ್ಕೃತಿ ಭಾವನಾತ್ಮಕತೆಗೆ ಹೆಸರುವಾಸಿಯಾಗಿದ್ದು ೪೮ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಕಲಾವಿದೆ ಸಾಧಕಿ ಜಾನಕಮ್ಮ ಅವರ ನೆನಪು ಹಾಗೂ ನಮನ ಕಾರ್ಯಕ್ರಮ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರಾದ ಸಂಗೀತ ನಿರ್ದೇಶಕ ಮಹೇಶ್ ಕೋಟೆ, ಉದ್ಯಮಿಗಳಾದ ವಿಜಯನ್, ಮೈಸಿ ಕತ್ತಣ್ಣೀರ ಪತ್ರಕರ್ತ ಎಂ ಎನ್ ಚಂದ್ರಮೋಹನ್, ಆದಮ್ ಸುಮೇಶ್, ಅಜೀಜ್ ಕಿಶೋರ್, ಕಲಾವಿದ ಭರಮಣ್ಣ ಬೆಟಗೇರಿ ಇರ್ಫಾನ್ ಖಾನ್ ನೃತ್ಯ ಸಂಯೋಜಕ ಅಪ್ಸರ್, ಮತ್ತಿತರರು ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದ ಕುರಿತು ಹಾಗೂ ಜಾನಕಮ್ಮ ಅವರ ಸಂಕ್ಷಿಪ್ತ ಪರಿಚಯವನ್ನು ಮುಖ್ಯಸ್ಥರಾದ ರವಿ ಅವರು ನಡೆಸಿಕೊಟ್ಟರು. ರವಿ ಝೇಂಕಾರ್, ಶಾಂತಲಾ ರವಿ, ರವಿ ಕೊಡಗು, ಅಭಿ, ದಿನೇಶ್ ಮಲ್ಲ, ಲಿಖಿತ್, ರಶ್ಮಿ, ಸಪ್ನ ಸೇರಿದಂತೆ ಹಲವು ಗಾಯಕರು ನಿರಂತರ ಐದು ಗಂಟೆಗಳ ಕಾಲ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಜೂನಿಯರ್ ರಾಜಕುಮಾರ್ ಎಂದೇ ಚಿರಪರಿಚಿತರಾಗಿರುವ ಮೈಸೂರಿನ ಬೈರಾಜ್ ಅವರ ಗಾಯನ ಖ್ಯಾತ ನಟ ರಾಜಕುಮಾರ್ ಅವರ ನೆನಪು ಮರುಕಳಿಸುವಂತೆ ಮಾಡಿತು. ಬಾಲ ಕಲಾವಿದರಾದ ಟಿ. ಕೆ. ಋತ್ವಿಕ್ ಮತ್ತು ಕುಮಾರಿ ಷಷ್ಠಿ ಷಾಡ್ಗುಣ್ಯ ಅವರುಗಳನ್ನು ಸೇರಿದಂತೆ ಕಲಾವಿದರನ್ನು ಗಣ್ಯರನ್ನು ಇವೆಂಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದರಾದ ಮಂಜು ಭಾರ್ಗವಿ ಕಾರ್ಯಕ್ರಮ ನಿರೂಪಿಸಿದರು. ಶಾಂತಲಾ ರವಿ ಪ್ರಾರ್ಥಿಸಿ, ಅಭಿ ಸ್ವಾಗತಿಸಿ, ರಶ್ಮಿ ವಂದಿಸಿದರು.