ಶನಿವಾರಸಂತೆ, ಜು. ೨೪: ಕೊಡಗಿನ ಗಡಿಭಾಗ ಕೊಡ್ಲಿಪೇಟೆಯಲ್ಲೊಂದು ಚಂದದ ಗ್ರಂಥಾಲಯವಿದೆ. ಇದು ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆ. ಇಲ್ಲಿ ಹದಿಮೂರು ಸಾವಿರಕ್ಕೂ ಅಧಿಕ ವಿವಿಧ ಗ್ರಂಥಗಳಿವೆ. ೫೦೦ಕ್ಕೂ ಅಧಿಕ ಮಂದಿ ಸಾರ್ವಜನಿಕರು ಹಾಗೂ ೧,೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಪ್ರತಿದಿನ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಗ್ರಂಥಾಲಯಕ್ಕೆ ಭೇಟಿ ನೀಡಿ ತಮಗೆ ಬೇಕಾದ ಪುಸ್ತಕಗಳನ್ನು, ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಆದರೆ, ಈ ಗ್ರಂಥಾಲಯದಲ್ಲಿ ಕೆಲವು ತಿಂಗಳುಗಳಿAದ ಜಿಲ್ಲೆಯದ್ದಾಗಲೀ, ರಾಜ್ಯದ್ದಾಗಲೀ ಯಾವುದೇ ದಿನಪತ್ರಿಕೆಗಳು ಲಭ್ಯವಿಲ್ಲ.
ಈ ವಿಚಾರ ದಿನಪತ್ರಿಕೆ ಅರಸಿ ಬರುವ ಓದುಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಗ್ರಂಥಾಲಯ ಮೇಲ್ವಿಚಾರಕಿ ಮಮತಾ ಅವರನ್ನು ಪ್ರಶ್ನಿಸಿದಾಗ, ದಿನಪತ್ರಿಕೆಗಳ ಖರೀದಿಗೆ ಅಗತ್ಯವಿರುವ ಅನುದಾನವನ್ನು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಿAದ ಬಿಡುಗಡೆ ಮಾಡದ ಕಾರಣ, ಪತ್ರಿಕೆಗಳನ್ನು ತರಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಂಥಾಲಯದಲ್ಲಿ ದಿನಪತ್ರಿಕೆಗಳಿಲ್ಲದ ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದವರಾದರೂ ತಕ್ಷಣ ಸ್ಪಂದಿಸಿ, ಅಗತ್ಯ ಅನುದಾನ ಬಿಡುಗಡೆ ಮಾಡಿ, ಕೊಡ್ಲಿಪೇಟೆ ಗ್ರಂಥಾಲಯದಲ್ಲಿ ದಿನಪತ್ರಿಕೆಗಳ ವ್ಯವಸ್ಥೆಯನ್ನಾದರೂ ಪುನಃ ಆರಂಭಿಸಬೇಕು. ಜಿಲ್ಲೆಯ ಪತ್ರಿಕೆಗಳಾದರೂ ಲಭ್ಯವಿರುವಂತೆ ಗಮನಹರಿಸಲಿ ಎಂದು ಸದಸ್ಯರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.