ಸುಂಟಿಕೊಪ್ಪ, ಜು. ೨೭: ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯನ್ನು ಹಂತ ಹಂತವಾಗಿ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ನಿರ್ಬಂಧಗಳನ್ನು ತರುತ್ತಿದೆ ಎಂದು ಕೃಷಿ ಇಲಾಖೆಯ ಕೊಡಗು ಜಿಲ್ಲಾ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿದರು.

ಸುಂಟಿಕೊಪ್ಪ ಕೊಡವ ಸಮಾಜದ ಸಭಾಂಗಣದಲ್ಲಿ ಸುಂಟಿಕೊಪ್ಪ ಲಯನ್ಸ್ ಕ್ಲಬ್ ಮತ್ತು ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಕಾಫಿ ಬೆಳೆಗಾರರಿಗೆ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯೂರಿಯ ಮತ್ತು ಇತರ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮಗಳನ್ನು ಕೇಂದ್ರ ಸರಕಾರ ೩ ದಶಕಗಳಿಗೂ ಹೆಚ್ಚು ಕಾಲ ಸಂಶೋಧನೆ ನಡೆಸಿದೆ. ಬಳಕೆಯಾಗುತ್ತಿರುವ ಈ ಗೊಬ್ಬರಗಳಲ್ಲಿ ಶೇಕಡ ೨೫ ರಿಂದ ೨೮ ಮಾತ್ರ ರೈತರಿಗೆ ಉಪಯೋಗವಾಗುತ್ತಿದ್ದು, ಉಳಿದ ಪ್ರಮಾಣ ಪರಿಸರ ಮತ್ತು ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಹಾಗೂ ಹಸುಗಳ ಹಾಲಿನಲ್ಲಿ ಕೂಡ ಹಾನಿಕಾರಕ ಅಂಶಗಳು ಪತ್ತೆಯಾಗಿವೆ ಎಂಬುದಾಗಿ ಈ ಸಂಶೋಧನೆಯಿAದ ತಿಳಿದು ಬಂದಿದೆ ಎಂದು ಅವರು ಹೇಳಿದರು.

ಕೃಷಿ ಮೇಲಿನ ಒಟ್ಟು ಸಬ್ಸಿಡಿ ಮೊತ್ತದಲ್ಲಿ ಶೇ.೩೨ ಯೂರಿಯ ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಸಬ್ಸಿಡಿಗೆ ವ್ಯಯವಾಗುತ್ತಿದ್ದು ಇದು ರೈತರಿಗೆ ಉಪಯೋಗಕಾರಿಯಲ್ಲ ಎಂದು ಕೇಂದ್ರ ಸರಕಾರ ಅರಿತುಕೊಂಡಿದೆ. ರೈತರು ಕೃಷಿ ಇಲಾಖೆ ವಿಜ್ಞಾನಿಗಳು ಹೇಳಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸದೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ. ಕೊಡಗು ಗಡಿ ಜಿಲ್ಲೆಯಾಗಿದ್ದು ಇಲ್ಲಿಂದ ಸಾಕಷ್ಟು ಪ್ರಮಾಣದಲ್ಲಿ ಯೂರಿಯ ಮತ್ತು ಇತರ ರಸಗೊಬ್ಬರ, ಕೈಗಾರಿಕೆಗಳಿಗೆ ಬಳಕೆಯಾಗಲು ಕಳ್ಳಸಾಗಣೆಯಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಯುದ್ಧ ಹಿನ್ನಲೆ ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದ್ದು, ಗೊಬ್ಬರ ತಯಾರಿಕೆ ಹಾಲಿ ಇರುವ ಉತ್ಪಾದನಾ ವೆಚ್ಚದಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದ ಕೇಂದ್ರ ಸರಕಾರ, ರಾಜ್ಯ ಸರಕಾರ ಮೂಲಕ ಯೂರಿಯ ಮತ್ತು ರಸಗೊಬ್ಬರಗಳ ಬಳಕೆಯಲ್ಲಿ ನಿರ್ಬಂಧ ತರುತ್ತಿದೆ ಎಂದು ಅವರು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸುಂಟಿಕೊಪ್ಪ ಲಯನ್ಸ್ ಅಧ್ಯಕ್ಷ ಎಸ್.ಜಿ ಶ್ರೀನಿವಾಸ್, ಸುಂಟಿಕೊಪ್ಪ ಲಯನ್ಸ್ಗೆ ೫೦ ವರ್ಷವಾಗಿರುವ ಹಿನ್ನಲೆಯಲ್ಲಿ ವರ್ಷಪೂರ್ತಿ ಆರೋಗ್ಯ ಶಿಕ್ಷಣ, ರೈತ ಕೇಂದ್ರೀಕೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾಫಿ ಬೆಳೆಗಾರರಿಗೆ ೧೨೬ ವರ್ಷಗಳ ಹಿನ್ನಲೆಯುಳ್ಳ ಕೋರಮಂಡಲ್ ಇಂಟರ್‌ನ್ಯಾಷನಲ್ ವತಿಯಿಂದ ಆಧುನಿಕ ತಂತ್ರಜ್ಞಾನ, ಕಡಿಮೆ ವೆಚ್ಚದಿಂದ ಹೆಚ್ಚು ಉತ್ಪಾದಕತೆ ಮತ್ತು ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಹಿನ್ನಲೆಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟನಲ್ಲಿ ಈ ಮಾಹಿತಿ ಶಿಬಿg,À ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆಯ ಕರ್ನಾಟಕ ಮತ್ತು ತಮಿಳುನಾಡು ವಲಯ ಮುಖ್ಯಸ್ಥ ಕಿರಣ್ ಕುಮಾರ್ ಅವರು ರಸಗೊಬ್ಬರಗಳ ಬಳಕೆಯ ಕುರಿತು ಪ್ರಾತಿಕ್ಷö್ಯತೆಯ ಮೂಲಕ ಮಾಹಿತಿ ನೀಡಿದರು.

ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕ ಬೆಳೆಗಳ ವಿಜ್ಞಾನಿ ಡಾ. ಕೆ.ವಿ ವಿರೇಂದ್ರ ಕುಮಾರ್, ಕಾಫಿ ಮತ್ತು ಕರಿಮೆಣಸು ಉತ್ಪಾದನ ವೆಚ್ಚ, ಇಳುವರಿ ಹೆಚ್ಚಿಸುವಿಕೆ, ರೋಗಗಳ ನಿಯಂತ್ರಣ ಕುರಿತು ಪ್ರಾತಿಕ್ಷö್ಯತೆಯ ಮೂಲಕ ವಿವರಿಸಿದರು. ಕಾಫಿ ಮಂಡಳಿಯ ಸೋಮವಾರಪೇಟೆ ವಿಭಾಗದ ಕಿರಿಯ ಸಂಪರ್ಕ ಅಧಿಕಾರಿ ಡಾ. ಅನಿಲ್, ಕಾಫಿ ಮಂಡಳಿಯ ಮೂಲಕ ಕಾಫಿ, ಕೃಷಿ, ಯೋತ್ರೋಪಕರಣಗಳಿಗೆ ಸಬ್ಸಿಡಿ ಲಭ್ಯವಿದ್ದು ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆಗೆ ಹೆಚ್ಚಿನ ಒತ್ತು ಕೊಡುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕೊಡಗು ಜಿಲ್ಲಾ ಜಂಟಿ ನಿರ್ದೇಶಕ ಚಂದ್ರಶೇಖರ್, ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕ ಬೆಳೆಗಳ ವಿಜ್ಞಾನಿ ಡಾ. ಕೆ.ವಿ ವಿರೇಂದ್ರ, ಕಾಫಿ ಮಂಡಳಿಯ ಸೋಮವಾರಪೇಟೆ ವಿಭಾಗದ ಕಿರಿಯ ಸಂಪರ್ಕ ಅಧಿಕಾರಿ ಡಾ. ಅನಿಲ್ ಅವರನ್ನು ಹಿರಿಯ ಕಾಫಿ ಬೆಳೆಗಾg ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಎನ್ ಬೋಸ್ ಮಂದಣ್ಣ ೨ ಸಂಸ್ಥೆಗಳ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಪಟ್ಟೆಮನೆ ಉದಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಲಯನ್ಸ್ ಕಾರ್ಯದರ್ಶಿ ಗ್ಲೆನ್ ಮೆನೆಜೇಸ್, ಕೋರಮಂಡಲ್ ಸಂಸ್ಥೆಯ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್, ವಿಜಯಲಕ್ಷಿö್ಮ ಶ್ರೀನಿವಾಸ್, ಲಯನ್ಸ್ ಪದಾಧಿಕಾರಿಗಳು ಹಾಗೂ ಕಾಫಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಹಿತಿಯನ್ನು ಪಡೆದುಕೊಂಡರು.