ಕೂಡಿಗೆ, ಜು. ೨೮: ಗಿರೀಶ್ ಭಾರದ್ವಾಜ್ ತೂಗು ಸೇತುವೆಗಳನ್ನು ನಿರ್ಮಿಸುವಲ್ಲಿ ಕ್ರಾಂತಿಕಾರಿ ಕೊಡುಗೆ ನೀಡಿದ ಶ್ರೇಷ್ಠ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಹೇಳಿದರು. ಸಮೀಪದ ಕಣಿವೆ ಗ್ರಾಮ ದಲ್ಲಿ ಆಯೋಜಿಸಿದ್ದ ತೂಗು ಸೇತುವೆಗಳ ನಿರ್ಮಾತೃ ಗಿರೀಶ್ ಭಾರದ್ವಾಜ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಿರೀಶ್ ಭಾರದ್ವಾಜ್ ನಿರ್ಮಿಸಿದ ಸೇತುವೆ ಗಳಿಂದಾಗಿ ಮಳೆಗಾಲದಲ್ಲಿ ಬಾಹ್ಯ ಪ್ರಪಂಚದಿAದ ಸಂಪರ್ಕ ಕಡಿದುಕೊಳ್ಳುತ್ತಿದ್ದ ನೂರಾರು ಹಳ್ಳಿಗಳ ಜನರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಅನುಕೂಲವಾಯಿತು. ಕನಿಷ್ಟ ವೆಚ್ಚದಲ್ಲಿ ಗರಿಷ್ಠ ಬಾಳಿಕೆ ಬರುವಂತಹ ಸೇತುವೆಗಳನ್ನು ನಿರ್ಮಿಸುವುದು ಇವರ ವಿಶೇಷತೆಯಾಗಿದೆ ಎಂದರು. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ೧೪೦ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ. ಕುಶಾಲನಗರದ ಕಾವೇರಿ ನಿಸರ್ಗಧಾಮ ಇಂದು ಈ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಗಿರೀಶ್ ಅವರ ತೂಗುಸೇತುವೆಯ ಕೊಡುಗೆಯೂ ಇದೆ ಎಂದರು.

ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಮಹದೇವ, ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಪ್ರಮುಖರಾದ ಅನಂತರಾಮ, ಕೆ.ಆರ್. ಲೋಕೇಶ್ ಮತ್ತಿತರರು ಇದ್ದರು.