ಶನಿವಾರಸಂತೆ, ಜು. ೨೮: ಪ್ರಸ್ತುತ ಸಮಾಜದಲ್ಲಿ ಅರ್ಥಪೂರ್ಣ ಜೀವನಕ್ಕಾಗಿ ಪೂರ್ವಜರ ಚಿಂತನೆ ಮತ್ತು ಸ್ಮರಣೆ ಅಗತ್ಯವಾಗಿದೆ ಎಂದು ಜಿಲ್ಲಾ ಮಾನವ ಬಂಧುತ್ವ ವೇದಿಕೆ ಪದಾಧಿಕಾರಿ ಬೇಕಲ್ ರಮಾನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಮಹಿಳಾ ಸಮಾಜದ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಹಾಗೂ ಸೋಮವಾರಪೇಟೆ ತಾಲೂಕು ಸಂಚಾಲನಾ ಸಮಿತಿ ವತಿಯಿಂದ ಆಯೋಜಿಸಿದ್ದ ಗ್ರಾಮ ಸಂಚಾಲಕರ ತರಬೇತಿ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆಯ ನಡುವೆ ಎಲ್ಲವೂ ತಿಳಿದಿದೆ ಎಂಬ ಅಹಂಭಾವ ಬೆಳೆಯುತ್ತಿದೆ. ಸಂವಿಧಾನದ ಆಶಯಗಳನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಇದ್ದರೂ ಉದ್ಯೋಗ ಮತ್ತು ಉದ್ದಿಮೆಗಳು ಖಾಸಗೀಕರಣದತ್ತ ಸಾಗುತ್ತಿವೆ. ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಿ ಅವರನ್ನು ಸಾಮಾಜಿಕ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹಿರಿಯ ದಲಿತ ಹೋರಾಟಗಾರ ಹಾಗೂ ಸಂಪನ್ಮೂಲ ವ್ಯಕ್ತಿ ಜೆ.ಆರ್. ಪಾಲಾಕ್ಷ ಅವರು ಭಾರತದಲ್ಲಿ ಹಿಂದುತ್ವವೋ? ಬಂಧುತ್ವವೋ? ಹಾಗೂ ಸಂವಿಧಾನದ ಆಶಯಗಳು ವಿಷಯದ ಕುರಿತು ಮಾತನಾಡಿ, ಇತಿಹಾಸದಲ್ಲಿ ಬೌದ್ಧರು ವೈದಿಕತೆ ಮತ್ತು ಅವೈಜ್ಞಾನಿಕತೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬಂಧುತ್ವಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ‘ಮಾನವ ಬಂಧುತ್ವ ವೇದಿಕೆ ಮತ್ತು ಸಾಮಾಜಿಕ ಸವಾಲುಗಳು’ ವಿಷಯ ಮಂಡಿಸಿ, ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗುತ್ತಿದೆ. ಸಂವಿಧಾನದ ಮೂಲ ಆಶಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯವಾಗಿದ್ದು, ಬಹುತ್ವದ ಭಾರತವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಮೈಸೂರು ವಿಭಾಗೀಯ ಸಂಚಾಲಕ ದೇವಪ್ಪ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಸರ್ವ ಜಾತಿ-ಧರ್ಮದ ಜನರನ್ನು ಒಗ್ಗೂಡಿಸುವ ಸಂಘಟನೆಯಾಗಿದೆ. ಎಲ್ಲರಿಗೂ ಸಮಾನ ಶಿಕ್ಷಣ, ವೈಚಾರಿಕತೆ ಮತ್ತು ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದು ವೇದಿಕೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಜೆ.ಎಲ್. ಜನಾರ್ಧನ್ ಮಾತನಾಡಿ, ಜಾತಿ-ಮತ ಭೇದವಿಲ್ಲದ ಭ್ರಾತೃತ್ವದ ಸಮಾಜ ನಿರ್ಮಾಣವೇ ಮಾನವ ಬಂಧುತ್ವ ವೇದಿಕೆಯ ಧ್ಯೇಯವಾಗಿದೆ. ಡಾ. ಅಂಬೇಡ್ಕರ್ ಅವರ ಕನಸಿನ ಸಮಾನತೆಯ ಸಮಾಜ ನಿರ್ಮಾಣಕ್ಕೆ ಗ್ರಾಮ ಸಂಚಾಲಕರ ತರಬೇತಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾಫಿ ಬೆಳೆಗಾರ ಹಾಗೂ ರೈತಪರ ಹೋರಾಟಗಾರ ಕೆ.ಟಿ. ಹರೀಶ್ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭವಾನಿ ಮಾತನಾಡಿದರು. ಕಲಾಮಂಡಳಿ ಸದಸ್ಯರು ಹಾಗೂ ದಲಿತ ಯುವ ಮುಖಂಡರಾದ ರಾಮು ಮತ್ತು ಸೋಮಣ್ಣ ಕ್ರಾಂತಿ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಈ ಸಂದರ್ಭ ತಾಲೂಕು ಸಂಚಾಲಕ ಎಂ.ಎಸ್. ವೀರೇಂದ್ರ, ಮುಖಂಡರಾದ ಸಿ.ಬಿ. ಅಬ್ಬಾಸ್, ಮಂಜಯ್ಯ, ವಿ. ಸಂದೀಪ್, ಡಿ.ಕೆ. ಪ್ರಸನ್ನ, ಡಾ. ಸ್ವಾಮಿನಾಥ್, ಸುರೇಶ್, ಶಿವಾನಂದ್, ಅವಿನಾಶ್, ರವಿ, ಸೋಮಣ್ಣ, ನವೀನ್, ವಿಶ್ವ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಾಮು ಪ್ರಾರ್ಥಿಸಿದರು. ವೀರೇಂದ್ರ ಕಾರ್ಯಕ್ರಮ ನಿರ್ವಹಿಸಿ, ಅವಿನಾಶ್ ವಂದಿಸಿದರು.