ಪೊನ್ನಂಪೇಟೆ, ಜು. ೨೮: ಕ್ರೀಡಾ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಕ್ರೀಡಾ ದಿಗ್ಗಜರು ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಅರ್ಥಪೂರ್ಣವಾದ ಸ್ನೇಹ ಮಿಲನ ಕಾರ್ಯಕ್ರಮವನ್ನು ಆಚರಿಸಿಕೊಂಡರು. ೧೯೮೨-೮೩ರ ಕರ್ನಾಟಕ ರಾಜ್ಯದ ಕ್ರೀಡಾ ವಸತಿ ನಿಲಯದ ಮೊದಲ ಬ್ಯಾಚ್‌ನ ಕ್ರೀಡಾಪಟುಗಳ ಈ ಸ್ನೇಹ ಮಿಲನ ಕಾರ್ಯಕ್ರಮವು ಪೊನ್ನಂಪೇಟೆ ಸಮೀಪದ ಕಿರುಗೂರಿನ ರೆಸಾರ್ಟ್ವೊಂದರಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ದಿಗ್ಗಜರು, ತಮ್ಮ ೪೪ ವರ್ಷಗಳ ಸುದೀರ್ಘ ಕ್ರೀಡಾ ಪಯಣದ ಅನುಭವವನ್ನು ಮೆಲುಕು ಹಾಕುತ್ತಾ, ನಡೆದು ಬಂದ ಹಾದಿಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಹಳೆಯ ದಿನಗಳ ಮಧುರ ಕ್ಷಣಗಳು, ತಮ್ಮ ಕ್ರೀಡಾ ಸಾಧನೆಯ ಹಾದಿ, ಈ ಸಾಧನೆಗಳಿಗಾಗಿ ದೊರೆತ ಪ್ರೇರಣೆ ಹಾಗೂ ಹಿಂದಿನ ಮರೆಯಲಾಗದ ಅನುಭವಗಳನ್ನು ಹಂಚಿಕೊAಡ ಈ ಕ್ರೀಡಾ ಸಾಧಕರು, ತಾವು ಪಟ್ಟ ಶ್ರಮ, ಎದುರಿಸಿದ ಸವಾಲುಗಳು ಮತ್ತು ಸಾಧಿಸಿದ ಮೈಲಿಗಲ್ಲುಗಳ ಬಗ್ಗೆ ಅವಲೋಕನ ನಡೆಸಿದರು.

ಕಾರ್ಯಕ್ರಮದಲ್ಲಿ ತಮ್ಮ ಕ್ರೀಡಾ ಭವಿಷ್ಯ ರೂಪಿಸಲು ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡಿದ ಪದ್ಮಶ್ರೀ ಡಾ. ಮೊಳ್ಳೆರ ಪಿ ಗಣೇಶ್, ಮೊಳ್ಳೆರ ಸುಬ್ಬಯ್ಯ ಹಾಗೂ ಚೇಂದAಡ ಈರಪ್ಪ ಅವರನ್ನು ವಿಶೇಷವಾಗಿ ಸ್ಮರಿಸಿದ ಈ ಹಿರಿಯ ಕ್ರೀಡಾ ದಿಗ್ಗಜರು, ಹೊಸ ಪೀಳಿಗೆಯ ಕ್ರೀಡಾಪಟುಗಳಿಗೆ ಯಶಸ್ಸು ಸಿಗಲು ಸರಿಯಾದ ಆಪ್ತ ಸಮಾಲೋಚನೆ, ತರಬೇತಿ ಮತ್ತು ಸರ್ಕಾರದಿಂದ ದೊರೆಯಬೇಕಾದ ಬೆಂಬಲದ ಬಗ್ಗೆಯು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಕ್ರೀಡೆಯ ಜೀವಂತಿಕೆಯನ್ನು ಭದ್ರಪಡಿಸಲು ತಮ್ಮ ಎಲ್ಲಾ ಅನುಭವಗಳನ್ನು ತರಬೇತಿ, ಸಲಹೆ ಮತ್ತು ಮಾರ್ಗದರ್ಶನದ ರೂಪದಲ್ಲಿ ದಾರೆ ಎರೆಯಲು ಸಿದ್ಧವಿರುವುದಾಗಿ ಇದೇ ಸಂದರ್ಭದಲ್ಲಿ ಇವರು ಘೋಷಿಸಿದರು.

ಈ ಕಾರ್ಯಕ್ರಮದಲ್ಲಿ ಒಲಂಪಿಯನ್‌ಗಳಾದ ಡಾ. ಅಂಜಪರವAಡ ಸುಬ್ಬಯ್ಯ, ಚೆಪ್ಪುಡಿರ ಎಸ್. ಪೂಣಚ್ಚ, ಅಂತರರಾಷ್ಟಿçÃಯ ಹಾಕಿ ಆಟಗಾರರಾದ ಕುಲ್ಲೇಟಿರ ಉತ್ತಯ್ಯ, ಮುಕ್ಕಾಟಿರ ವಿನೋದ್ ಚಿಣ್ಣಪ್ಪ, ಬುಟ್ಟಿಯಂಡ ಚಂಗಪ್ಪ, ರಾಷ್ಟಿçÃಯ ಹಾಕಿ ಆಟಗಾರರಾದ ಚೆಪ್ಪುಡಿರ ಕಾರ್ಯಪ್ಪ, ಬುಟ್ಟಿಯಂಡ ಕಾರ್ಯಪ್ಪ, ಕುಪ್ಪಂಡ ನಾಚಪ್ಪ, ಪಾರುವಂಗಡ ಸೋಮಣ್ಣ (ಗಿರಿ), ಕೊಕ್ಕಂಡ ಮೊಣ್ಣಪ್ಪ, ಕನ್ನಂಬಿರ ಗಣಪತಿ, ಕುಟ್ಟಂಡ ಕಾರ್ಸನ್, ಕಲಿಯಂಡ ಮಾದಯ್ಯ ಹಾಗೂ ಬಾಳೆಯಡ ಕಾಳಪ್ಪ, ಅಥ್ಲೆಟಿಕ್ಸ್ ಕ್ರೀಡಾಳುಗಳಾದ ಕೊಕ್ಕಲೆರ ನಾಣಯ್ಯ, ಕಾಳಚಂಡ ರವಿ ತಮ್ಮಯ್ಯ, ಕುಲ್ಲೇಟಿರ ಸುಬ್ಬಯ್ಯ ಮೊದಲಾದವರು ಭಾಗವಹಿಸಿದ್ದರು.