ವೀರಾಜಪೇಟೆ, ಜು. ೨೯: ನಗರದಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ವೀರಾಜಪೇಟೆ ಪೊಲೀಸರು ದಿಢೀರ್ ಆಗಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪತ್ತೆಹಚ್ಚುವ ತಪಾಸಣೆ ಕಾರ್ಯಾಚರಣೆಯನ್ನು ನಡೆಸಿದರು.

ಇತ್ತೀಚೆಗಷ್ಟೇ ವೀರಾಜಪೇಟೆಯ ಡಿವೈಎಸ್ಪಿ ಮಹೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಆಟೋ ಚಾಲಕರುಗಳ ಸಭೆ ನಡೆಸಿ ವಾಹನ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಮದ್ಯ ಸೇವಿಸಿ ವಾಹನ ಚಲಾಯಿಸದಂತೆ ಸೂಚಿಸಿ ಎಚ್ಚರಿಕೆ ನೀಡಲಾಗಿತ್ತು. ಈ ಸೂಚನೆಗಳು ಪಾಲನೆ ಆಗುತ್ತಿವೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವೀರಾಜಪೇಟೆ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಅವರ ನೇತೃತ್ವದಲ್ಲಿ ಪೊಲೀಸರು ನಗರದ ಬಸ್ ನಿಲ್ದಾಣ ಹಾಗೂ ಪ್ರಮುಖ ಜಂಕ್ಷನ್‌ಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ಆಟೋ ಚಾಲಕರು ಹಾಗೂ ಇತರ ವಾಹನ ಸವಾರರನ್ನು ತಡೆದು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಲಾಗುತ್ತಿದೆಯೆ ಎಂಬ ಬಗ್ಗೆ ತಪಾಸಣೆ ನಡೆಸಿದರು.

ಈ ರೀತಿಯ ದಿಢೀರ್ ತಪಾಸಣೆಗಳು ಮುಂದೆಯೂ ನಡೆಯಲಿದೆ ಎಂದು ವೀರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಮಾಹಿತಿ ನೀಡಿದರು. ಈ ಸಂದರ್ಭ ಅಪರಾಧ ವಿಭಾಗದ ಎಸ್.ಐ. ಕಾವೇರಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.