ಸೋಮವಾರಪೇಟೆ, ಜು.೨೯: ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗೊಂದಲಕಾರಿ ನೀತಿಗಳಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದರೂ ಜಿಲ್ಲೆಯ ಈರ್ವರು ಶಾಸಕರು ಮೌನಕ್ಕೆ ಶರಣಾಗಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಅವರು, ಪಡಿತರ ಚೀಟಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕೆಂದು ತಿಳಿಸಿದ ಸರ್ಕಾರ, ನಂತರ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರು ಮಾತ್ರ ದೃಢೀಕರಣ ಸಲ್ಲಿಸಿದರೆ ಸಾಕು ಎಂದು ಆದೇಶಿಸಿದೆ. ಸರ್ಕಾರದ ಇಂತಹ ಗೊಂದಲಕಾರಿ ನೀತಿಗಳಿಂದ ಬಡ ಮಂದಿ ಕೆಲಸ ಕಾರ್ಯ ಬಿಟ್ಟು ತಾಲೂಕು ಕಚೇರಿಗೆ ಅಲೆಯುವಂತಾಗಿದೆ ಎಂದರು.
ದಾಖಲಾತಿ ಪಡೆಯಲು ಶಾಲಾ ದೃಢೀಕರಣ ಪತ್ರ ಕಡ್ಡಾಯವಾಗಿದೆ. ಆದರೆ ಅವಿದ್ಯಾವಂತರು ಶಾಲಾ ದಾಖಲಾತಿ ತರುವುದಾದರೂ ಹೇಗೆ? ವಯಸ್ಕರು ವಂಶವೃಕ್ಷ ಮಾಡಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ವಿಚ್ಚೇದಿತ ಮಹಿಳೆಯರು ತಮ್ಮ ಮಕ್ಕಳಿಗೆ ದಾಖಲಾತಿ ಮಾಡಿಸಬೇಕಾದರೆ ಪತಿಯ ಶಾಲಾ ದಾಖಲಾತಿ ಅಗತ್ಯ. ಈಗಾಗಲೇ ವಿಚ್ಚೇದನ ಆಗಿರುವ ವ್ಯಕ್ತಿ ತನ್ನ ದಾಖಲೆಗಳನ್ನು ನೀಡುತ್ತಾನೆಯೇ? ಇಂತಹ ಸನ್ನಿವೇಶಗಳನ್ನು ಸಾಕಷ್ಟು ಬಡವರು ಎದುರಿಸುತ್ತಿದ್ದರೂ ಶಾಸಕದ್ವಯರು ಮಾತ್ರ ಸುಮ್ಮನಿದ್ದಾರೆ ಎಂದು ದೂರಿದರು.
ಕರ್ನಾಟಕದಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ದೊಡ್ಡ ಅಕ್ರಮ ನಡೆದಿದೆ. ಪಶುವೈದ್ಯಕೀಯ ಇಲಾಖೆಯ ೪೦೦ ಮಂದಿಯ ನೇಮಕಾತಿ ರದ್ದು ಮಾಡಿ ಅವರ ಭವಿಷ್ಯದ ಮೇಲೆ ಚೆಲ್ಲಾಟವಾಡಿರುವ ರಾಜ್ಯ ಸರ್ಕಾರದ ಸಚಿವರು, ಮುಖ್ಯಮಂತ್ರಿಗಳು ತಮ್ಮ ಹೊಣೆಗಾರಿಕೆ ಅರಿತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗೆ ಬಿಡದಿ ಹೋರಾಟದಲ್ಲಿ ಭಾಗಿಯಾಗುವ ರೈತರ ಬಂಧನ ಸಾಕ್ಷಿಯಾಗಿದೆ. ಅನ್ನ ನೀಡುವ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ. ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಸುತ್ತಿದೆ. ಜಿಲ್ಲೆಯ ರೈತರನ್ನು ತಿತಿಮತಿ ಹಾಗೂ ಕೊಡ್ಲಿಪೇಟೆಯಲ್ಲಿ ತಡೆಯುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಅನುಸರಿಸಿದೆ ಎಂದು ಅಭಿಮನ್ಯುಕುಮಾರ್ ಹೇಳಿದರು.
ಸರ್ಕಾರಿ ಕಚೇರಿ-ಆಸ್ಪತ್ರೆ ಸಮಸ್ಯೆ ಬಗೆಹರಿಸಿ: ಚುನಾವಣೆಗೂ ಮುನ್ನ ತಾಲೂಕು ಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳನ್ನು ಮುಂದಿಟ್ಟುಕೊAಡು ಪ್ರಚಾರ ನಡೆಸಿದ ಕಾಂಗ್ರೆಸ್, ಇದೀಗ ಇದ್ದ ವ್ಯವಸ್ಥೆಯನ್ನೂ ಹಾಳು ಮಾಡಿದೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರಿತಪಿಸುತ್ತಿದ್ದಾರೆ. ಮೂಳೆ ತಜ್ಞರು ಸರಿಯಾಗಿ ಆಗಮಿಸುತ್ತಿಲ್ಲ. ಕಳೆದ ೪ ತಿಂಗಳಿನಿAದ ೧೦೮ ಆಂಬ್ಯುಲೆನ್ಸ್ ಸೇವೆಯೂ ಇಲ್ಲದಂತಾಗಿದೆ ಎಂದು ಗೋಷ್ಠಿಯಲ್ಲಿದ್ದ ಮಂಡಲ ಬಿಜೆಪಿ ಕಾರ್ಯದರ್ಶಿ ಎಸ್.ಆರ್. ಸೋಮೇಶ್ ಆರೋಪಿಸಿದರು.
ಕೊಡಗಿನಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ: ಜಿಲ್ಲೆಯ ಮಾಲ್ದಾರೆಯಲ್ಲಿ ಪ್ರಸಿದ್ಧ ದೇವಾಲಯದ ಪಕ್ಕದಲ್ಲಿ ಗೋರಿ ನಿರ್ಮಿಸಿ ಪೂಜೆ ಸಲ್ಲಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಡೆಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತವೆ. ದುಷ್ಕರ್ಮಿಗಳಿಗೆ ಸರ್ಕಾರದ ಭಯವೇ ಇಲ್ಲದಂತಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುಷ್ಟರ ಯತ್ನಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಮಂಡಲ ಅಧ್ಯಕ್ಷ ಗೌತಮ್ ಗೌಡ ಹೇಳಿದರು. ಗೋಷ್ಠಿಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ಮೋಕ್ಷಿಕ್ ರಾಜ್, ದರ್ಶನ್ ಜೋಯಪ್ಪ, ಕೃಷಿ ಮೋರ್ಚಾ ಕಾರ್ಯದರ್ಶಿ ಶರತ್‌ಚಂದ್ರ ಇದ್ದರು.