ವೀರಾಜಪೇಟೆ, ಜು. ೩೦: ಆರಾಯಿರನಾಡು ಪೂಮಾಲೆ ಮಂದ್‌ನಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಸಮುದಾಯ ಭವನ ಹಾಗೂ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡವನ್ನು ಧಾರ್ಮಿಕ ವಿಚಾರಗಳಿಗೆ ಹೊರತು ಪಡಿಸಿ ಅನ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಆರಾಯಿರ ನಾಡು ಉಪಾಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೪೭ರಲ್ಲಿ ಅಂದಿನ ಆಡಳಿತ ಮಂಡಳಿ ಮೂರು ಎಕರೆ ಜಾಗವನ್ನು ಖರೀದಿ ಮಾಡಿದ್ದು ಯಾವುದೇ ಕುಟುಂಬಗಳು ಜಾಗವನ್ನು ದಾನ ನೀಡಿರುವುದಿಲ್ಲ. ಹಾಲಿ ಇರುವ ಮೂರು ಎಕರೆ ಜಾಗದಲ್ಲಿ ಒತ್ತುವರಿಯಾಗಿದ್ದು, ಮಂದಿನ ಜಾಗವನ್ನು ಗುರುತಿಸಿಕೊಡುವಂತೆ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ತೆರವುಗೊಳಿಸಿ ಸ್ವಾದೀನಪಡಿಸಿಕೊಳ್ಳಲಾಗುವುದು ಎಂದರು.

ಆರಾಯಿರ ನಾಡಿನ ಐದು ನಾಡುತಕ್ಕರಲ್ಲಿ ಒಬ್ಬರು ಅಧ್ಯಕ್ಷರಾಗಿರುತ್ತಾರೆ. ೧೭ ಗ್ರಾಮದಿಂದ ಇಬ್ಬರು ಸಮಿತಿ ಸದಸ್ಯರುಗಳಾಗಿರುತ್ತಾರೆ. ಕುಕ್ಲೂರು ಗ್ರಾಮ ಪಂಚಾಯಿತಿಗೆ ಸೇರಿದ್ದ ಮಂದ್ ಇದೀಗ ವೀರಾಜಪೇಟೆ ಪುರಸಭೆ ವ್ಯಾಪ್ತಿಗೆ ಸೇರಿದೆ. ಹಿಂದಿನಿAದಲೂ ಈ ಮಂದ್‌ನಲ್ಲಿ ಕೊಡವರ ಸಂಸ್ಕೃತಿ ಆಚಾರ ವಿಚಾರಗಳಿಗಾಗಿ ಕೆಲಸ ಮಾಡುತ್ತಿದ್ದು, ಇಂದು ಕೂಡ ಮುಂದುವರಿಯುತ್ತಾ ಬಂದಿದೆ. ಮಹಾಸಭೆಯ ನಿರ್ಣಯದಂತೆ ನಮ್ಮ ಆಡಳಿತ ಮಂಡಳಿಯ ಕಚೇರಿ ಮತ್ತು ಅದಕ್ಕೆ ಸಂಬAಧಿಸಿದ ಕಡತಗಳನ್ನು, ಪೀಠೋಪಕರಣಗಳನ್ನು ಇಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಸಮುದಾಯ ಭವನಕ್ಕೆ ಬಾಗಿಲು ಇಲ್ಲದೆ ಸಮಿತಿ ಸಭೆ, ಸಮಾರಂಭಗಳನ್ನು ಬೇರೆಡೆ ನಡೆಸಲಾಗುತ್ತಿತ್ತು. ಒಂದು ಸೂರಿನಡಿಯಲ್ಲಿ ಸಭೆಗಳನ್ನು, ಸಮಾರಂಭಗಳನ್ನು ನಡೆಸುವ ಉದ್ದೇಶದಿಂದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಬಳಸಿಕೊಂಡು ಮಂದ್‌ನ ವಿರುದ್ಧ ಅಪಪ್ರಚಾರ ಸರಿಯಲ್ಲ ಎಂದರು. ನಾವು ಕೊಡವರ ಸಂಸ್ಕೃತಿ ಆಚಾರ, ವಿಚಾರ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸಲು ಬದ್ಧವಾಗಿದ್ದು ಎಂದಿಗೂ ಯಾವುದೇ ಕಾರಣಕ್ಕೆ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಪೊರವನಾಡು ನಾಡು ತಕ್ಕರಾದ ಪೊನ್ನಕಚ್ಚಿರ ಸೋಮಣ್ಣ, ಆರಾಯಿರನಾಡ್ ಮರಣಫಂಡ್‌ನ ಅಧ್ಯಕ್ಷ ಚೇಂದAಡ ಪೊನ್ನಪ್ಪ, ಕಾರ್ಯದರ್ಶಿ ಪೊಟ್ಟಂಡ ಗಣೇಶ್, ಆರಾಯಿರನಾಡ್ ಕ್ರೀಡಾ ಅಧ್ಯಕ್ಷ ಪುಗ್ಗೆರ ನಂದ, ಬೈರವನಾಡ್ ಊರ್ ತಕ್ಕರಾದ ಮೇಕೇರಿರ ನಾಣಯ್ಯ, ಆಡಳಿತ ಮಂಡಳಿ ಸದಸ್ಯರುಗಳಾದ ಅಪ್ಪಾರಂಡ ಸುಧೀರ್ ಕುಂಡ್ರAಡ ಪೆಮ್ಮಯ್ಯ, ಕುಂದಿರ ಪೊನ್ನಪ್ಪ ಉಪಸ್ಥಿತರಿದ್ದರು.