ಶನಿವಾರಸಂತೆ ಜು. ೩೦: ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ ವತಿಯಿಂದ ಸಂಘದ ಕಚೇರಿಯ ಆವರಣದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪಗುಚ್ಛ ನಮನ ಸಲ್ಲಿಸುವ ಮೂಲಕ ೨೭ನೇ ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಿಸಲಾಯಿತು.

ನಂತರ ಗೋಪಾಲಪುರದ ಹರ್ಷಿತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಟಿ.ಎ. ಕಾರ್ಯಪ್ಪ ಮಾತನಾಡಿ, ದೇಶ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವ ಸೈನಿಕರು ನಿವೃತ್ತಿಯ ನಂತರ ಸರ್ಕಾರಿ ಕಚೇರಿಗಳಿಗೆ ಹೋದಾಗ ಅಲ್ಲಿನ ಅಧಿಕಾರಿಗಳ, ಸಿಬ್ಬಂದಿಯ ದುರ್ನಡತೆ ವಿಷಾದನೀಯ. ಸಂಘದ ಕಟ್ಟಡಕ್ಕೆ ಜಾಗ ನೀಡುವಂತೆ ಮಾಡಿದ ಮನವಿಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಸೈನಿಕರ ಸಂಘದ ಆಸ್ಪತ್ರೆ ವೈದ್ಯ ಡಾ. ಸುರೇನ್ ಸುಬ್ಬಯ್ಯ, ನಿವೃತ್ತ ಸೈನಿಕರ ಸಂಘದ ಸಿ.ಎಸ್.ಡಿ. ಕ್ಯಾಂಟೀನ್ ವ್ಯವಸ್ಥಾಪಕ ಕರ್ನಲ್ ಕಾವೇರಪ್ಪ, ಸಂಘದ ಕಾರ್ಯದರ್ಶಿ ಒ.ಎಸ್. ಚಿಂಗಪ್ಪ, ಸಹ ಕಾರ್ಯದರ್ಶಿ ಸುಬೇದಾರ್ ವಾಸಪ್ಪನ್, ಸೋಮವಾರಪೇಟೆ ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿ ಸುಬೇದಾರ್ ಈರಪ್ಪ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎ.ಎಸ್.ಮಹೇಶ್ ಮಾತನಾಡಿ, ೨೭ ವರ್ಷಗಳ ಹಿಂದೆ ೬೦ ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಶೌರ್ಯ ಮೆರೆದ ಹುತಾತ್ಮ ಭಾರತೀಯ ಯೋಧರನ್ನು ಸ್ಮರಿಸಿದರು.

ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಪಾಂಡು ಪ್ರಾಸ್ತಾವಿಕ ನುಡಿಯಾಡಿದರು. ನಿರ್ದೇಶಕರಾದ ಕೆ.ಪಿ. ತಿಮ್ಮಯ್ಯ, ಕೆ.ಡಿ. ಚಂದ್ರಪ್ಪ, ಬಿ.ಡಿ. ಪರಮೇಶ್, ಹೆಚ್.ಪಿ. ಮಹೇಶ್, ಬಿ.ಆರ್. ಆನಂದ್, ಎಂ.ಕೆ. ಗಿರೀಶ್, ಪಿ.ಎನ್. ಗಂಗಾಧರ್, ಎಂ.ಟಿ. ಚಂದ್ರೇಗೌಡ, ಸಿ.ಬಿ. ಪ್ರಸನ್ನ, ಮಡಿಕೇರಿ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ಆರ್. ಶೆಟ್ಟಿ ಹಾಗೂ ಹೋಬಳಿಯಾದ್ಯಂತ ವಿವಿಧೆಡೆಯಿಂದ ಆಗಮಿಸಿದ್ದ ಸದಸ್ಯರು ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು. ನಿವೃತ್ತ ಸೈನಿಕ ಎಸ್.ಎನ್. ಪಾಂಡು ಸ್ವಾಗತಿಸಿ, ಶಿಕ್ಷಕಿ ಜಯಲಕ್ಷಿö್ಮ ನಿರೂಪಿಸಿ, ವಂದಿಸಿದರು.