ಗೋಣಿಕೊಪ್ಪಲು, ಜು. ೩೧: ಕಾಫಿ ಮಂಡಳಿ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ವತಿಯಿಂದ ಅವರೆಗುಂದ ಹಾಗೂ ಮಾಲ್ದಾರೆಯಲ್ಲಿ ಬುಡಕಟ್ಟು ಕಾಫಿ ಬೆಳೆಗಾರರಿಗಾಗಿ ಎರೆಹುಳು ಗೊಬ್ಬರ ತಯಾರಿಕಾ ಘಟಕವನ್ನು ಸ್ಥಾಪಿಸಲಾಯಿತು.
ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ಈ ಘಟಕದಲ್ಲಿ ಸಂಘದ ಸದಸ್ಯರಿಗೆ ಪ್ರತಿ ಕಿಲೋಗೆ ರೂ. ೧೦ ರಂತೆ ಗೊಬ್ಬರ ವಿತರಿಸಲಾಗುತ್ತಿದೆ.
ಎರೆಹುಳು ಗೊಬ್ಬರ ತಯಾರಿಕೆ ಯೋಜನೆಯ ಪ್ರಧಾನ ಸಂಶೋಧಕ ಡಾ.ಟಿ.ಎನ್.ಗೋಪಿನಂದನ್ ಮಾತನಾಡಿ ಬುಡಕಟ್ಟು ಕಾಫಿ ಬೆಳೆಗಾರರ ಸಂಘದ ಸದಸ್ಯರು ತಮ್ಮ ಕಾಫಿ, ಕಾಳು ಮೆಣಸು, ಅಡಿಕೆ ಮತ್ತು ಏಲಕ್ಕಿ ಇತರೆ ಬೆಳೆಗಳಿಗೆ ಎರೆಹುಳು ಗೊಬ್ಬರವನ್ನು ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಇದರಿಂದ ತಮ್ಮ ಕೌಟುಂಬಿಕ ಆದಾಯವನ್ನು ವೃದ್ಧಿಗೊಳಿಸಬಹುದು. ಬುಡಕಟ್ಟು ಜನರಿಗಾಗಿ ಮೀಸಲಿರುವ ಸಂಘಕ್ಕೆ ಹೆಚ್ಚಿನ ಜನರು ಸದಸ್ಯರಾಗಿ ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು. ಎರೆಹುಳು ಗೊಬ್ಬರ ತಯಾರಿಕೆ ಘಟಕವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಇನ್ನೂ ಹೆಚ್ಚು ಘಟಕಗಳನ್ನು ತೆರೆಯಲಾಗುವುದು ಇದರ ಜತೆಗೆ ಬುಡಕಟ್ಟು ರೈತ ಉತ್ಪಾದಕ ಸಂಘಕ್ಕೆ ನೀಡಲಾಗುತ್ತಿರುವ ಪರಿಸರ ಸ್ನೇಹಿ ಇಕೋ ಪಲ್ಪರ್ ಘಟಕವನ್ನು ಸ್ಥಾಪಿಸುವ ಬಗೆಗೂ ಚಿಂತಿಸಲಾಗುವುದು ಎಂದು ತಿಳಿಸಿದರು.
ಆದಿವಾಸಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಂಘದ ಅಧ್ಯಕ್ಷ ವೈ.ಎಂ.ಕಾಳ, ಕಾಫಿ ಮಂಡಳಿಯ ಮಾಜಿ ಸಂಚಾಲಕ ಅಶ್ವಿನಿ ಕುಮಾರ್, ಯೋಜನೆಯ ಕ್ಷೇತ್ರ ಅಧಿಕಾರಿ ಜಡೆಸ್ವಾಮಿ, ಯೋಜನೆಯ ಸಂಚಾಲಕರು ವಿಘ್ನೇಶ್ವರ ರಾಜ್, ರೈತ ಉತ್ಪಾದಕ ಸಂಸ್ಥೆಯ ಸಂಚಾಲಕ ದಿವಾಕರ್ ಹಾಜರಿದ್ದರು.
ಮಾಲ್ದಾರೆಯಲ್ಲಿ ಕಾಫಿ ಮಂಡಳಿ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಪ್ರಧಾನ ಸಂಶೋಧಕ ಡಾ.ಟಿ.ಎನ್. ಗೋಪಿನಂದನ್ ಬುಡಕಟ್ಟು ಕಾಫಿ ಬೆಳೆಗಾರರಿಗೆ ಎರೆಹುಳು ಗೊಬ್ಬರ ವಿತರಿಸಿದರು.