ಮಡಿಕೇರಿ ಜು. ೩೧ ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಪೊಲೀಸ್ ಇಲಾಖೆಯ ಸಿಬ್ಬಂದಿಗಾಗಿ ಸಮಗ್ರ ಆರೋಗ್ಯ ಶಿಬಿರವು ನಗರದ ಮೈತ್ರಿ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಡಿಎಆರ್ ಪೊಲೀಸ್ ಇನ್ಸ್ಪೆಕ್ಟರ್ ಗಣೇಶ್ ಹಾಗೂ ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಡಾ.ಸನತ್ ಕುಮಾರ್ ಅವರು, ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯದ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಎಚ್‌ಐವಿ, ಸಿಫಿಲಿಸ್, ಕ್ಷಯರೋಗ, ವೈರಲ್ ಹೆಪಟೈಟಿಸ್ ರೋಗಗಳ ಬಗ್ಗೆ ಜಾಗೃತಿ ಹೊಂದುವುದರ ಜೊತೆಗೆ ಮಧುಮೇಹ, ರಕ್ತದೊತ್ತಡ ಮೊದಲಾದ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವ ಅಗತ್ಯ ಎಂದು ಕರೆ ನೀಡಿದರು.
ಡಿಎಆರ್ ಪೊಲೀಸ್ ಇನ್ಸ್ಪೆಕ್ಟರ್ ಗಣೇಶ್ ಮಾತನಾಡಿ, ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಗಾಗಿ ಇಂತಹ ಸಮಗ್ರ ಆರೋಗ್ಯ ಶಿಬಿರಗಳು ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬ ಸಿಬ್ಬಂದಿಯೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಕ್ಷಯರೋಗ, ವೈರಲ್ ಹೆಪಟೈಟಿಸ್, ಮಧುಮೇಹ, ರಕ್ತದೊತ್ತಡ ಸೇರಿದಂತೆ ಅಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು. ಅಲ್ಲದೆ, ಆರೋಗ್ಯ ಶಿಕ್ಷಣ, ಸಮಾಲೋಚನೆ, ಅಗತ್ಯವಿರುವವರಿಗೆ ಪ್ರಯೋಗಾಲಯ ಪರೀಕ್ಷೆಗಳು ಹಾಗೂ ಮುಂದಿನ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭ ಐಸಿಟಿಸಿ ಸಲಹೆಗಾರ್ತಿ ಅನಿತಾ ಕುಮಾರಿ ಅವರು ಮೋಬಿಲೈಸೇಶನ್ ಏಡ್ಸ್ ಸುರಕ್ಷಾ ಕಾರ್ಯಕ್ರಮ ಹಾಗೂ ಸ್ವಯಂ ಎಚ್‌ಐವಿ ಪರೀಕ್ಷೆ ಮಾಡುವ ವಿಧಾನ ಕುರಿತು ವಿವರವಾಗಿ ಮಾಹಿತಿ ನೀಡಿದರು. ಈ ಡಿಜಿಟಲ್ ಉಪಕ್ರಮಗಳು ಎಚ್‌ಐವಿ ಪರೀಕ್ಷೆ ಮತ್ತು ಜಾಗೃತಿ ಹೆಚ್ಚಿಸಲು ಸಹಾಯಕವಾಗಿವೆ ಎಂದು ತಿಳಿಸಿದರು.