ವೀರಾಜಪೇಟೆ, ಜು. ೩೧: ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು ಸಮೀಪದ ವೀರಾಜಪೇಟೆ-ಮಡಿಕೇರಿ ಮುಖ್ಯರಸ್ತೆಯ ದುಸ್ಥಿತಿಗೆ ಬೇಸತ್ತ ಸಾರ್ವಜನಿಕರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ರಸ್ತೆಯಲ್ಲಿ ವರ್ಷಗಳಿಂದ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ಮಳೆಗಾಲದಲ್ಲಿ ಅವುಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಪಘಾತದ ಭೀತಿಯೂ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ರಸ್ತೆಯ ಮಧ್ಯದಲ್ಲಿದ್ದ ಅಪಾಯಕಾರಿ ಗುಂಡಿಯಲ್ಲಿ ಬಾಳೆಗಿಡ ನೆಟ್ಟು, ಅದರ ಸುತ್ತ ಕಲ್ಲುಗಳನ್ನು ಜೋಡಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಗುಂಡಿಯಲ್ಲಿ ಬಾಳೆಗಿಡ ನೆಟ್ಟಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ನಿರ್ವಹಣೆಯಲ್ಲಿ ನಿರ್ಲಕ್ಷö್ಯ ತೋರಿರುವ ಸರ್ಕಾರ ಹಾಗೂ ಇಲಾಖೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀರಾಜಪೇಟೆ-ಮಡಿಕೇರಿ ಮುಖ್ಯರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಿ, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂಬAಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.