*ಗೋಣಿಕೊಪ್ಪ, ಆ. ೨: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಳ್ಳಿಮಾಡ ಸಿ. ಕರುಂಬಯ್ಯ ಬಸ್ ನಿಲ್ದಾಣದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಜಗದೀಶ್ವರ ಬಸ್ ಮೂಲಕ ಪತ್ರಿಕೆಯನ್ನು ಗ್ರಾಮಕ್ಕೆ ಮುಟ್ಟಿಸುತ್ತಿದ್ದ ಬಸ್ ಮಾಲೀಕ ಕೆ. ಬೈಗೋಡು ಗ್ರಾಮದ ಮುರುವಂಡ ದಿ. ಎಂ. ಬೋಜಪ್ಪ ಅವರ ಪುತ್ರ ಮುರುವಂಡ ಬಿ. ನೀಲಕಂಠ ಮೊಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಇವರ ಪತ್ನಿ ಉಷಾ ಮೊಣ್ಣಪ್ಪ ಕೂಡ ಸನ್ಮಾನ ಸ್ವೀಕರಿಸಿದರು. ಜಗದೀಶ್ವರ ಮತ್ತು ಕೂರ್ಗ್ ಯೂನಿಯನ್ ಬಸ್ ಚಾಲಕರಾಗಿ ಸೇವೆ ನೀಡಿರುವ ಅಮ್ಮತ್ತಿ ಗ್ರಾಮದ ಕಾವಾಡಿಚಂಡ ಬಿ. ಕಾಳಪ್ಪ ಮತ್ತು ಅವರ ಪತ್ನಿ ಮುತ್ತಮ್ಮ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ಅಶೋಕ ಬಸ್ ನಿರ್ವಾಹಕರಾಗಿ ಸೇವೆ ನೀಡುತ್ತಿರುವ ಮಾದಾಪುರ ಗ್ರಾಮದ ಮಂಡೀರ ಜೆ. ಮಿಥುನ್ ಮದನ್ ಸನ್ಮಾನ ಸ್ವೀಕರಿಸಿದರು.

ಸುಮಾರು ೪ ಕ್ಕಿಂತ ಹೆಚ್ಚು ವರ್ಷ ಬಸ್ ಮೂಲಕ ಸೇವೆ ನೀಡಿದ ಸೇವಕರನ್ನು ಸನ್ಮಾನಕ್ಕೆ ಪರಿಗಣಿಸಿರುವ ಬಗ್ಗೆ ಸನ್ಮಾನಿತರು ಹೆಮ್ಮೆ ವ್ಯಕ್ತಪಡಿಸಿದರು. ಮುರುವಂಡ ಬಿ. ನೀಲಕಂಠ ಮೊಣ್ಣಪ್ಪ ಮಾತನಾಡಿ, ಬಸ್ ಸೇವೆಗೆ ನೀಡಿದ ಗೌರವವನ್ನು ತಂದೆ ಬೋಜಪ್ಪ ಅವರಿಗೆ ಅರ್ಪಿಸುವುದಾಗಿ ಹೇಳಿದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಬಸ್ ಸೇವೆಯನ್ನು ಪರಿಗಣಿಸಿ ಪತ್ರಕರ್ತರು ನೀಡಿರುವ ಗೌರವ ಶ್ಲಾಘನೀಯ ಎಂದರು.

ಪೊಲೀಸ್ ಉಪ ನಿರೀಕ್ಷಕ ಕಾಳೇಗೌಡ ಮಾತನಾಡಿ, ಸಾರಿಗೆ ವ್ಯವಸ್ಥೆ ಸಾರ್ವಜನಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಪತ್ರಿಕೆಯನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುತ್ತಿದ್ದ ವ್ಯವಸ್ಥೆಯನ್ನು ಗುರುತಿಸಿರುವುದು ಮೆಚ್ಚುಗೆಯ ವಿಷಯವಾಗಿದೆ ಎಂದರು. ಜಗದೀಶ್ ಜೋಡುಬೀಟಿ ಕಾರ್ಯಕ್ರಮ ನಿರೂಪಿಸಿ ಮಾತನಾಡಿದರು.

ತಾಲೂಕು ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ. ವಿ. ಅರುಣ್‌ಕುಮಾರ್, ನಿರ್ದೇಶಕ ಚಿಮ್ಮಣಮಾಡ ದರ್ಶನ್ ದೇವಯ್ಯ, ಸದಸ್ಯರುಗಳಾದ ಮನೋಜ್‌ಕುಮಾರ್, ಎಚ್. ಕೆ. ಜಗದೀಶ್, ಸಿಂಗಿ ಸತೀಶ್ ಮಾತನಾಡಿದರು.